ಮಂಗಳೂರು: ತಿರುವನಂತಪುರ– ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲನ್ನು (ಸಂಖ್ಯೆ 20631/20632) ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೆ ವಿಸ್ತರಿಸಲಾಗಿದ್ದು, ಈ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿ ಮಂಗಳವಾರ ಬೆಳಿಗ್ಗೆ 9.35ಕ್ಕೆ ಚಾಲನೆ ನೀಡಿದ್ದಾರೆ.
ಮಂಗಳೂರು ಸೆಂಟ್ರಲ್– ತಿರುವನಂತಪುರ ನಡುವೆ ವಂದೇ ಭಾರತ್ ರೈಲಿನ ದೈನಂದಿನ ಸೇವೆ ಬುಧವಾರದಿಂದ (ಮಾ.13) ಆರಂಭವಾಗಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ 6.25ಕ್ಕೆ ಹೊರಡುವ ರೈಲು ತಿರುವನಂತಪುರವನ್ನು ಮಧ್ಯಾಹ್ನ 3.05ಕ್ಕೆ ತಲುಪಲಿದೆ. ಅಲ್ಲಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ. ಈ ರೈಲಿಗೆ ಕಾಸರಗೋಡು, ಕಣ್ಣೂರು, ಕೊಯಿಕ್ಕೋಡ್, ತಿರೂರ್, ಶ್ವರ್ನೂರು ಜಂಕ್ಷನ್, ತ್ರಿಶೂರ್, ಎರ್ನಾಕುಳಂ ಜಂಕ್ಷನ್, ಅಳಪುಝ ಹಾಗೂ ಕೊಲ್ಲಂ ಜಂಕ್ಷನ್‌ಗಳಲ್ಲಿ ನಿಲುಗಡೆ ಇದೆ.