ಮಂಗಳೂರು: ಇಲ್ಲಿನ ಕುಲಶೇಖರದ ಹಾಲಿನ ಡೇರಿ ಬಳಿಯ ಮನೆಯೊಂದರಲ್ಲಿ 87 ವರ್ಷದ ಮಾವನಿಗೆ ಸೊಸೆಯು ವಾಕಿಂಗ್ ಸ್ಟಿಕ್ನಿಂದ ಹಲ್ಲೆ ನಡೆಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಆರೋಪಿಯಾಗಿರುವ ಮೆಸ್ಕಾಂ ಉದ್ಯೋಗಿ ಉಮಾಶಂಕರಿ (47) ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪದ್ಮನಾಭ ಹಲ್ಲೆಗೊಳಗಾದವರು. ಅವರ ಮಗ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪದ್ಮನಾಭ ಅವರು ಸೊಸೆಯೊಂದಿಗೆ (ಮಗನ ಪತ್ನಿ) ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ.
‘ನೀವು ಯಾಕೆ ಈ ಮನೆಯಲ್ಲಿದ್ದೀರಿ’ ಎಂದು ಸೊಸೆ ಆಗಾಗ ನನ್ನ ಜೊತೆ ತಗಾದೆ ತೆಗೆಯುತ್ತಿದ್ದಳು. ಧರಿಸಿದ್ದ ಅಂಗಿಯನ್ನು ತೆಗೆದು ಸೋಫಾದ ಮೇಲೆ ಇಟ್ಟಿದ್ದಕ್ಕೆ ಶನಿವಾರ ಜಗಳ ತೆಗೆದು, ವಾಕಿಂಗ್ ಸ್ಟಿಕ್ನಿಂದ ಕಾಲು, ಸೊಂಟದ ಮೇಲೆ ಹೊಡೆದಿದ್ದಾಳೆ. ಸೋಫಾ ಸೆಟ್ನತ್ತ ದೂಡಿ, ‘ಸತ್ತು ಹೋಗು’ ಎಂದು ತುಳುವಿನಲ್ಲಿ ಬೈದಿದ್ದಾಳೆ’ ಎಂದು ಸಂತ್ರಸ್ತ ಪದ್ಮನಾಭ ಅವರು ಆರೋಪಿಸಿದ್ದಾರೆ. ‘ಹಲ್ಲೆಯಿಂದ ಅವರ ಬಲ ಮೊಣಕೈನಲ್ಲಿ ಹಾಗೂ ಎಡಕಣ್ಣಿನ ಹುಬ್ಬಿನ ಬಳಿ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸೊಸೆ ತನ್ನನ್ನು ಕೊಲ್ಲಬಹುದೆಂಬ ಭಯದಿಂದ ಪದ್ಮನಾಭ ಅವರು ಮಾರ್ನಮಿಕಟ್ಟೆಯಲ್ಲಿರುವ ಸೋದರ ರಮೇಶ್ ಮನೆಗೆ ಹೋಗಿದ್ದರು. ಬಳಿಕ ಮೂಡುಬಿದಿರೆಯಲ್ಲಿರುವ ಮಗಳು ಪ್ರಿಯಾಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಹಲ್ಲೆಯ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆ ವಿಡಿಯೊವನ್ನು ಪ್ರೀತಮ್ ತನ್ನ ಸೋದರಿ ಪ್ರಿಯಾ ಅವರಿಗೆ ಕಳುಹಿಸಿದ್ದರು. ವೃದ್ಧ ತಂದೆಗೆ ಅತ್ತಿಗೆ ಉಮಾಶಂಕರಿ ಹಲ್ಲೆ ನಡೆಸಿದ ಬಗ್ಗೆ ಪ್ರಿಯಾ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಶಸ್ತ್ರ ಬಳಸಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.