ಮಣಿಪಾಲ: ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಹಾಗೂ ರೋಟರಿ ಐಸಿರಿ, ಪರ್ಕಳ ಇವರ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯನ್ನು ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನ ಆವರಣದಲ್ಲಿಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಐಸಿರಿ ಪರ್ಕಳ ಅಧ್ಯಕ್ಷೆ ರೋ.ಸ್ಮಿತಾ ಜಿ. ಕಾಮತ್, ಮೌಲ್ಯಧಾರಿತ ಶಿಕ್ಷಣದ ಪ್ರಾಮುಖ್ಯತೆಯನ್ನು ಹಾಗೂ ಎಳೆಯ ಮಕ್ಕಳಲ್ಲಿ ಹೇಗೆ ಅದನ್ನು ಅಳವಡಿಸಬೇಕೆಂದು ತಿಳಿಯಪಡಿಸಿದರು.
ಜಪಾನ್‌ನಿನ ಹಿರೋಷಿಮಾ-ನಾಗಸಕಿ ಮೇಲೆ ನಡೆದ ಬಾಂಬ್ ದಾಳಿಯು ಅತ್ಯಂತ ಘೋರ ಘಟನೆ ಮತ್ತು ಈ ಸಂದರ್ಭದಲ್ಲಿ ಆ ಘಟನೆಯ ದ್ವೇಷವನ್ನು ಹೋಗಲಾಡಿಸುವ ಸಲುವಾಗಿ, “ಒಂದು ಮಗುವಿಗೆ ತಲಾ ಒಂದು ಶಿಕ್ಷಕಿ”ಯನ್ನು ಐದು ವರ್ಷಗಳ ಕಾಲ ನೇಮಿಸಿ, ಜಪಾನ್ ಸರ್ಕಾರವು ತೆಗೆದುಕೊಂಡ ನಿರ್ಧಾರವನ್ನು ಅವರು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಚಂದ್ರಕಲಾ ಮಾತನಾಡಿ, ಎಳೆಯ ಮಕ್ಕಳಿಗೆ ಶಿಸ್ತು ಮತ್ತು ಸಂಸ್ಕಾರ ಬೆಳೆಸುವಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಪಾತ್ರ ಮಹತ್ವದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಸುನೀತಾ, ಉಪನ್ಯಾಸಕಿ ದಿವ್ಯಾ ಕೋಟ್ಯಾನ್, ಅತಿಥಿ ಉಪನ್ಯಾಸಕಿ ರಮ್ಯಾ ಭಾಗವತ್ ಹಾಗೂ ರೋ.ಗೀತಾ, ಎಂ.ಉಪಾಧ್ಯ, ರೋ.ಗುರುಪ್ರಸಾದ್ ಕಾಮತ್, ರೋ.ಸುನಿಲ್ ಕುಮಾರ್ ಮತ್ತು ಸಂಸ್ಥೆಯಲ್ಲಿ ಪ್ರಶಿಕ್ಷಣ ಪಡೆಯುತ್ತಿರುವ ಪೂರ್ವ ಪ್ರಾಥಮಿಕ /ಮಾಂಟೆಸ್ಸೆರಿ ಯ ಎಲ್ಲಾ ವಿದ್ಯಾರ್ಥಿ ಶಿಕ್ಷಕಿಯರು ಉಪಸ್ಥಿತರಿದ್ದರು.
ಅಶ್ವಿನಿ ಹಾಗೂ ರೇಶ್ಮಾ ಉಪನ್ಯಾಸದ ಬಗ್ಗೆ ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು. ರೋ. ಸ್ಮಿತಾ ಜಿ. ಕಾಮತ್ ಸ್ವಾಗತಿಸಿ, ರೋ.ಗೀತಾ ಎಂ. ಉಪಾಧ್ಯ ವಂದಿಸಿದರು.