ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ಖ್ಯಾತಿಯ ಸಾಹಿತಿ ಸೀತಾರಾಮ ಕುಲಾಲ್ ವಿಧಿವಶ

ಮಂಗಳೂರು: ‘ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ’, ‘ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ’ ಹೀಗೆ ತುಳುನಾಡಿನ ಜನತೆಯ ಮನಸ್ಸಲ್ಲಿ ಅಚ್ಚಳಿಯದೇ ಉಳಿಯುವ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್ ಭಾನುವಾರ ವಿಧಿವಶರಾಗಿದ್ದಾರೆ.
ತುಳು ಸಾಹಿತ್ಯ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಅವರು, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ/ ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ. ಹೀಗೆ ಸುಮಾರು 11 ತುಳು ಚಿತ್ರಗಳಿಗೆ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಹೀಗಾಗಿ ಎಂ.ಕೆ.ಸೀತಾರಾಮ್ ಕುಲಾಲ್ ಇಂದು ಕೂಡಾ ತುಳುನಾಡಿನ ಜನರ ನೆನಪಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಮಂಗಳೂರಿನ ಬಿಜೈಯಲ್ಲಿ ಸೀತಾರಾಮ್ ಕುಲಾಲ್ ರವರು ಮೊದಲು “ದಾಸಿ ಪುತ್ರ ” ಎನ್ನುವ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದ್ದರು.
ಕಲಾವಿದರಾಗಿ ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ ನಟನೆ ನಾಟಕ ಹಾಗೂ ಹಾಡುಗಳಗಾಗಲಿ ಯಾವುದೇ ರೀತಿಯ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಇವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ.
ಪ್ರಶಸ್ತಿಗಳು:
ಅಪ್ರತಿಮ ತುಳು ಸಾಹಿತ್ಯದ ಸಾಧಕರಾದ ಇವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್‍ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಹಲವಾರು ಪ್ರಶಸ್ತಿ ಸಂದಿದ್ದು, ಇದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.