ಬೆಂಗಳೂರು: 2.5 ಮಿಲಿಯನ್ ಡಾಲರ್ ನೀಡಿ ಇಲ್ಲವಾದರೆ ಕರ್ನಾಟಕದಾದ್ಯಂತ ಹೋಟೆಲ್‌ಗಳು, ದೇವಸ್ಥಾನಗಳು, ರೈಲುಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸುತ್ತವೆ ಎನ್ನುವ ಬೆದರಿಕೆ ಇಮೇಲ್ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ
ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟಗೊಂಡ ಒಂದು ದಿನದ ನಂತರ, ಮಾರ್ಚ್ 2 ರಂದು ಈ ಇಮೇಲ್ ಕಳುಹಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, “ಎರಡು-ಮೂರು ದಿನಗಳ ಹಿಂದೆ ನಮಗೆ ಬೆದರಿಕೆ ಮೇಲ್ ಬಂದಿತ್ತು, ಆದರೆ ನಾವು ಅದನ್ನು ಬಹಿರಂಗಪಡಿಸಲಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ‘ಶಾಹಿದ್‌ಖಾನ್ 10786’ ಎಂಬ ಐಡಿಯಿಂದ ಬಂದ ಮೇಲ್‌ನಲ್ಲಿ 2.5 ಮಿಲಿಯನ್ ಯುಎಸ್ ಡಾಲರ್ ಹಣ ಪಾವತಿಸದಿದ್ದರೆ ದೇವಸ್ಥಾನಗಳು, ಹೋಟೆಲ್‌ಗಳು, ಬಸ್‌ಗಳು ಮತ್ತು ರೈಲುಗಳಲ್ಲಿ ಬಾಂಬ್‌ಗಳನ್ನು ಇಡುವುದಾಗಿ ಬೆದರಿಕೆ ಹಾಕಲಾಗಿದೆ. ಬೇಡಿಕೆ ಈಡೇರದಿದ್ದರೆ ಅಂಬಾರಿ ಉತ್ಸವ ಬಸ್ಸಿಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಹುಸಿ ಇಮೇಲ್ ಬೆದರಿಕೆಯೇ ಎಂಬುದು ನಮಗೆ ತಿಳಿದಿಲ್ಲ” ಎಂದಿದ್ದಾರೆ.
ಈ ಇಮೇಲ್ ಅನ್ನು ಶಾಹಿದ್ ಖಾನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಶಂಕಿತ ಪ್ರಾಕ್ಸಿ ಐಡಿ, [email protected] ನಿಂದ ಮಧ್ಯಾಹ್ನ 2.48 ರ ಸುಮಾರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.
“ಎಚ್ಚರಿಕೆ 01” ಮತ್ತು “ಎಚ್ಚರಿಕೆ 02” ಎಂಬ ಉಪಶೀರ್ಷಿಕೆಗಳೊಂದಿಗಿನ ಇಮೇಲ್ ನಲ್ಲಿ , “ಚಲನಚಿತ್ರ ಟ್ರೇಲರ್ ಕುರಿತು ನಿಮ್ಮ ಆಲೋಚನೆಗಳು ಏನು? ನೀವು ನಮಗೆ 2.5 ಮಿಲಿಯನ್ ಡಾಲರ್‌ಗಳನ್ನು ನೀಡದಿದ್ದರೆ, ನಾವು ಕರ್ನಾಟಕದಾದ್ಯಂತ ಬಸ್‌ಗಳು, ರೈಲುಗಳು, ಟ್ಯಾಕ್ಸಿಗಳು, ದೇವಸ್ಥಾನಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳನ್ನು ಉಂಟುಮಾಡುತ್ತೇವೆ. ನಾವು ನಿಮಗೆ ಇನ್ನೊಂದು ಟ್ರೈಲರ್ ತೋರಿಸಲು ಬಯಸುತ್ತೇವೆ. ಮುಂದಿನದನ್ನು ಅಂಬಾರಿ ಉತ್ಸವ ಬಸ್ಸಿನಲ್ಲಿ ಸ್ಫೋಟಿಸಲಿದ್ದೇವೆ. ಅಂಬಾರಿ ಉತ್ಸವ ಬಸ್ ಸ್ಫೋಟದ ನಂತರ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಬೇಡಿಕೆಗಳನ್ನು ಎತ್ತುತ್ತೇವೆ. ಮತ್ತು ನಿಮಗೆ ಕಳುಹಿಸಿದ ಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತೇವೆ. ಮುಂದಿನ ಸ್ಫೋಟದ ಬಗ್ಗೆ ನಾವು ಟ್ವೀಟ್ ಮಾಡುತ್ತೇವೆ” ಎಂದು ಬರೆಯಲಾಗಿದೆ.
ಸೋಮವಾರ ಸಂಜೆ 5.30ರ ಸುಮಾರಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಸೈಬರ್ ಕ್ರೈಂ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.