ಉಡುಪಿ: ಬ್ರಾಹ್ಮಣ ಮಹಾಸಭಾ ಪುತ್ತೂರು ವತಿಯಿಂದ ಯೋಗಾಸನ ಪ್ರಾತ್ಯಕ್ಷಿಕೆ ಹಾಗೂ ಆರೋಗ್ಯ ಜಾಗೃತಿ ಉಪನ್ಯಾಸ ಕಾರ್ಯಕ್ರಮ

ಉಡುಪಿ: ಬ್ರಾಹ್ಮಣ ಮಹಾಸಭಾ ಪುತ್ತೂರು ವತಿಯಿಂದ ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಗವತೀ ಸಭಾಗೃಹದಲ್ಲಿ ತಿಂಗಳ ಕಾರ್ಯಕ್ರಮದ ಅಂಗವಾಗಿ ಯೋಗ ತಜ್ಞರು ಮತ್ತು ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಹಿರಿಯ ಯೋಗ ಗುರುಗಳಾದ ಪಿ.ವಿ. ಭಟ್ ಇವರಿಂದ ಯೋಗ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.

ಈ ಸಂದರ್ಭ ಪಿ.ವಿ. ಭಟ್ ಮಾತನಾಡಿ, ದೈನಂದಿನ ಯಾಂತ್ರಿಕ ಬದುಕಿನಿಂದ ಜಡ ಕಟ್ಟಿದ ನಮ್ಮ ದೇಹ ಮತ್ತು ಮನಸ್ಸನ್ನು ಪ್ರಫುಲ್ಲಿತಗೊಳಿಸಲು ಯೋಗ ಅತ್ಯಂತ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನ ಭಾಗವಾಗಿ ಅಳವಡಿಸಿಕೊಂಡು ನಿರಂತರ ಯೋಗಾಭ್ಯಾಸ ಮಾಡಿ ಸ್ವತಃ ಆರೋಗ್ಯವಂತರಾಗುವ ಜೊತೆ ಸ್ವಸ್ಥ, ಸದೃಢ ಸಮಾಜವನ್ನು ರೂಪಿಸಲು ಸಹಕಾರಿಯಾಗಬಹುದು ಎಂದರು.

ನಂತರ ಪಿ.ವಿ. ಭಟ್ ಅವರ ನಿರ್ದೇಶನದಲ್ಲಿ ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ಶಾಖೆಯ ಯೋಗ ಬಂಧುಗಳಿಂದ ಯೋಗಾಸನದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ನಿರಂತರ ಯೋಗಾಭ್ಯಾಸದಿಂದ ಆಗುವ ಪ್ರಯೋಜನ ಮತ್ತು ಪರಿಣಾಮಗಳ ಬಗ್ಗೆ ವಿವರವಾಗಿ ಮನಮುಟ್ಟುವಂತೆ ತಿಳಿಸಲಾಯಿತು.

ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಗುರುಗಳಾದ ಪಿ.ವಿ.ಭಟ್ ಮತ್ತು ಯೋಗಪಟುಗಳಾದ ಸುನೀತಾ ಚೈತನ್ಯ, ಅನುಪಮಾ, ಲಕ್ಷ್ಮೀ ಕುಮಾರಿ, ಶ್ರೀಲಕ್ಷ್ಮಿ, ಪುಷ್ಪಾಂಜಲಿ ಪ್ರಕಾಶ್, ಗಾಯತ್ರಿ ಭಟ್ ಇವರನ್ನು ಮಹಾಸವಾದ ವತಿಯಿಂದ ಗೌರವಿಸಲಾಯಿತು.

ಹಿರಿಯ ಸದಸ್ಯರಾದ ಡಾ. ಶ್ರೀಪತಿ ರಾವ್ ಮತ್ತು ಕಾಂತಿ ರಾವ್ ದಂಪತಿಗಳನ್ನು ಗೌರವಿಸಲಾಯಿತು. ಫೆಬ್ರವರಿ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿದ ಸದಸ್ಯರನ್ನು ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳನ್ನು ಅಭಿನಂದಿಸಲಾಯಿತು.

ಕಾರ್ಯದರ್ಶಿ ಮಂಜುಳಾ ವಿ. ಪ್ರಸಾದ್, ಆಪದ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು

ಪುತ್ತೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷೆ ಶುಭಾ ಬಾಲ್ತಿಲ್ಲಾಯ ಪ್ರಸ್ತಾವಿಸಿ ಸ್ವಾಗತಿಸಿದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ಕಾರಂತ್ ವಂದಿಸಿದರು.