ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿಇಂದು ಶ್ರೀ ಲಲಿತ ಮಹಾ ತ್ರಿಪುರ ಸುಂದರಿ ಮಹಾಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.
ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿ ನಿತ್ಯ ನಿರಂತರ ಶ್ರೀಚಕ್ರ ಆರಾಧನೆ ನಡೆಯುತ್ತಿರುವ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿಗೆ ಅತಿ ಪ್ರಿಯವೆನಿಸಿದ ಈ ಮಹಾನ್ ಯಾಗವು ಕ್ಷೇತ್ರ ಸ್ವಾಮಿಣಿಯಿಂದ ಅನುಗ್ರಹಿತರಾದ ಅನುಸೂಯ ಭಟ್ ಮತ್ತು ಮಕ್ಕಳ ಬಾಪ್ತು ಪ್ರಾಯಶ್ಚಿತ್ತ ಪೂರಕವಾಗಿ ಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ.
ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಅರ್ಚಿಸಿ ಶ್ರೀ ತ್ರಿಪುರಾಂಬಿಕೆಯ ಅನುಗ್ರಹವನ್ನು ಯಾಚಿಸುವ ಪರಮ ಪವಿತ್ರವಾದ ಈ ಯಾಗವು
ಶ್ರೀಚಕ್ರ ಆರಾಧಕರನ್ನೊಳಗೊಂಡ ವಿಪ್ರೊತ್ತಮರ ಸಹಕಾರದೊಂದಿಗೆ ಬೆಳಿಗ್ಗೆ 9:30 ಗಂಟೆಗೆ ಆರಂಭಗೊಳ್ಳಲಿದೆ.
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾಧನೆ ಬ್ರಾಹ್ಮಣರಾಧನೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.