ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಲಿದ್ದಾರೆ. ಕಳೆದ ಹಲವು ದಿನಗಳಿಂದ ಬಿಜೆಪಿ ನಾಯಕರೊಂದಿಗೆ ನಡೆದ ಮಾತುಕತೆ ವಿಫಲಗೊಂಡ ಹಿನ್ನಲೆ ಇದೀಗ ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಪುತ್ತಿಲ ಪರಿವಾರ ಘೋಷಿಸಿದೆ.
ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತಾ, ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದರು.
ಬಿಜೆಪಿ ಸೇರ್ಪಡೆಗೆ ಕುರಿತಂತೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪುತ್ತಿಲ ಅವರನ್ನು ಬೇಟಿಯಾಗಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಹಲವು ಬೇಡಿಕೆಗಳನ್ನು ಪುತ್ತಿಲ ಪರಿವಾರ ಇಟ್ಟಿತ್ತು. ಆದರೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರ್ಪಡೆಯಾಗ ಬೇಕೆಂದು ನಾಯಕರು ಹೇಳಿದ್ದರೆನ್ನಲಾಗಿದೆ. ಈ ಹಿನ್ನಲೆ ಮಾತುಕತೆ ವಿಫಲವಾಗಿದ್ದು, ಪುತ್ತಿಲ ಪರಿವಾರದ ಷರತ್ತಿಗೆ ಯಾವುದೇ ಮಾನ್ಯತೆ ನೀಡದ ಹಿನ್ನಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗೆ ಪುತ್ತಿಲಪರಿವಾರ ನಿರ್ಧರಿಸಿದೆ.
ಇದಕ್ಕೆ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ” ಅರುಣ್ ಪುತ್ತಿಲ ಅವರ ಮನವೊಲಿಸುವ ಕೆಲಸವನ್ನು ನಮ್ಮ ನಾಯಕರು ಮಾಡಿದ್ದಾರೆ. ಬಿಜೆಪಿಯು ಇಂದು ಇಷ್ಟು ಶಕ್ತಿಯುತವಾಗಿದೆ ಎಂದರೆ ಅದಕ್ಕೆ ಕಾರಣ ನಾವು ಪಟ್ಟ ಪರಿಶ್ರಮ, ಹೋರಾಟ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ, ಪ್ರತೀ ಬಾರಿ ಚುನಾವಣೆ ಎದುರಾದಾಗಲೂ ಏನಾದರೂ ಸಮಸ್ಯೆ ಎದುರಾಗುತ್ತದೆ “.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವ ಕೆಲಸವನ್ನು ಮಾಡಿದ್ದೇವೆ. ಪುತ್ತಿಲ ಪರಿವಾರ ಎಂಬುದು ಒಂದು ಸ್ವತಂತ್ರ ಸಂಸ್ಥೆ, ಅಸೆಂಬ್ಲಿ ಚುನಾವಣೆ ಎದುರಿಸುವುದಕ್ಕೂ ಲೋಕಸಭಾ ಚುನಾವಣೆ ಎದುರಿಸುವುದಕ್ಕೂ ವ್ಯತ್ಯಾಸವಿದೆ. ನನಗೆ ಮತ್ತೆ ಬಿಜೆಪಿ ಟಿಕೆಟ್ ಕೊಟ್ಟರೆ ಭಾರೀ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಹೊಂದಿದ್ದೇನೆ ” ಎಂದಿದ್ದಾರೆ.