ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಧರಣಿ ನಡೆಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸದನ ಆರಂಭ ಆಗುತ್ತಿದ್ದಂತೆಯೆ ಬಾವಿಗೆ ಇಳಿದು ಧರಣಿ ನಡೆಸಿದ ಬಿಜೆಪಿ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಜೈಶ್ರೀರಾಂ, ಮೋದಿ ಮೋದಿ ಎಂದು ಘೋಷಣೆ ಕೂಗಿದರು.
ಸಿಎಂ ಉತ್ತರಕ್ಕೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿಎಂ ರಾಜೀನಾಮೆ ಕೊಡಬೇಕು. ಇದು ಹಿಂದೂ ವಿರೋಧಿ ಬಜೆಟ್. ಸರ್ಕಾರ ನಾಲಾಯಕ್ ಸರ್ಕಾರವಾಗಿದೆ. ಇದು ದೇಶದ್ರೋಹಿಗಳ ಪರವಾಗಿರುವ ಸರ್ಕಾರವಾಗಿದೆ. ಇದನ್ನು ವಜಾ ಮಾಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು. ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು ರಾಜ್ಯಪಾಲರ ಭೇಟಿಗೆ ತೆರಳಲಿದ್ದಾರೆ.
ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ನಮ್ಮ ಸರ್ಕಾರ ಇದ್ದಿದ್ದರೆ ಅಲ್ಲೇ ಗುಂಡು ಹಾರಿಸುತ್ತಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ಬಿರಿಯಾನಿ ಕೊಡಿಸುವ ಕೆಲಸ ಮಾಡ್ತಿದೆ. ದೇಶದ್ರೋಹಿಗಳಿಗೆ ಬೆಂಬಲ ಕೊಡುವ ಸರ್ಕಾರ ಇದು. ಪಾಕಿಸ್ತಾನ ಜ಼ಿಂದಾಬಾದ್ ಘೋಷಣೆ ಕೂಗಿದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದರು.