ಸಂದೇಶಖಾಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಟಿಎಂಸಿ ನಾಯಕ ಶೇಖ್ ಷಹಜಹಾನ್ ಬಂಧನ

ಕೋಲ್ಕತ್ತಾ: ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಷಹಜಹಾನ್ ಮತ್ತು ಆತನ ಸಹಚರರು ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆಯ ಆರೋಪ ಹೊಂದಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇಖ್ ಷಹಜಹಾನ್ ನನ್ನು ಬಂಗಾಳದ ವಿಶೇಷ ಪೊಲೀಸ್ ತಂಡವು ಮಧ್ಯರಾತ್ರಿ ಬಂಧಿಸಿದೆ ಎಂದು ಮಾಧ್ಯಮ ವರದಿ ಹೇಳಿದೆ. ಈತ ಕಳೆದ 55 ದಿನಗಳಿಂದ ಪರಾರಿಯಾಗಿದ್ದ. ಬಂಧನದ ನಂತರ, ಈತನನ್ನು ಬಸಿರ್ಹತ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು ಎಂದು ಎನ್.ಡಿ.ಟಿವಿ ವರದಿ ಹೇಳಿದೆ.

ಬಂಧನಕ್ಕೆ ಮುನ್ನ ಹಲವು ದಿನಗಳಿಂದ ನಾಯಕನ ಚಟುವಟಿಕೆಗಳ ಮೇಲೆ ತಂಡ ನಿಗಾ ಇರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ನನ್ನು ಬಂಧಿಸಲು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆದೇಶಿಸಿದ ಮೂರು ದಿನಗಳ ನಂತರ ಈತನ ಬಂಧನವಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಈ ತಿಂಗಳು ತೃಣಮೂಲ ಕಾಂಗ್ರೆಸ್‌ನ ಪ್ರಬಲ ನಾಯಕ ಶಹಜಹಾನ್ ಶೇಖ್ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಟಿಎಂಸಿ ನಾಯಕನ ದೌರ್ಜನ್ಯದ ವಿರುದ್ಧ ಮಹಿಳೆಯರ ಗುಂಪು ನ್ಯಾಯವನ್ನು ಕೋರುತ್ತಿದೆ.