ತಿರುವನಂತಪುರ: ದೇಶದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನಗೆ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.
ಪ್ರಧಾನಮಂತ್ರಿ ಮೋದಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದ ಮೂರು ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಉದ್ಘಾಟಿಸಲು VSSC ಗೆ ಬಂದಿದ್ದರು. ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಗಗನಯಾನ ಮಿಷನ್ ಗೆ ಆಯ್ಕೆಯಾಗಿರುವ ನಾಲ್ಕು ಮಂದಿ ಗಗನಯಾನಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ ಘೋಷಣೆ ಮಾಡಿದ ನಾಲ್ವರು ಗಗನಯಾತ್ರಿಗಳೆಂದರೆ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ.
🚨 Historic moment in Indian space sector.
— Indian Tech & Infra (@IndianTechGuide) February 27, 2024
First visuals of Indian astronauts who will travel to space next year in an ISRO rocket. @isro pic.twitter.com/UyJyrzHGVO
ನಾಲ್ಕು ಮಂದಿ ಗಗನಯಾತ್ರಿಗಳಿಗೆ ಗಗನಯಾನದ ಕಿಟ್ ನೀಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದರು. ಅಲ್ಲದೆ ಅವರು ದೇಶದ 1.4 ಬಿಲಿಯನ್ ಜನರ ಆಕಾಂಕ್ಷೆಗಳನ್ನು ಒಳಗೊಂಡಿರುವ ನಾಲ್ಕು ಶಕ್ತಿಗಳು ಎಂದು ಬಣ್ಣಿಸಿದ್ದಾರೆ.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ನಾಲ್ಕು ದಶಕಗಳ ನಂತರ, ಒಬ್ಬ ಭಾರತೀಯ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಲು ಸಿದ್ಧನಾಗಿದ್ದಾನೆ. ಈ ಬಾರಿ ಕೌಂಟ್‌ಡೌನ್, ಸಮಯ ಮತ್ತು ರಾಕೆಟ್ ಕೂಡ ನಮ್ಮದಾಗಿರಲಿದೆ. ಗಗನಯಾನ ಮಾನವ ಹಾರಾಟದ ಮಿಷನ್‌ನಲ್ಲಿ ಬಳಸಲಾದ ಹೆಚ್ಚಿನ ಉಪಕರಣಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂಬುದಕ್ಕೆ ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದಿದ್ದಾರೆ.
ಅಂತೆಯೇ ದೇಶದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಹಿಳೆಯರು ವಹಿಸಿದ “ಪ್ರಮುಖ ಪಾತ್ರ” ವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಚಂದ್ರಯಾನ – ಚಂದ್ರನ ಮಿಷನ್ ಮತ್ತು ಗಗನ್ಯಾನ್ ಅವರ ಕೊಡುಗೆ ಮತ್ತು ಭಾಗವಹಿಸುವಿಕೆ ಇಲ್ಲದೆ ಸಾಧ್ಯವಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶಸ್ಸು ದೇಶದ ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಧರ್ಮದ ಬೀಜಗಳನ್ನು ಬಿತ್ತುವುದಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹವಾದ ಅಭಿವೃದ್ಧಿಯ ದಾಪುಗಾಲುಗಳನ್ನು ಪ್ರದರ್ಶಿಸುವ ಮೂಲಕ 21 ನೇ ಶತಮಾನದಲ್ಲಿ ಕ್ರಿಯಾತ್ಮಕ ಜಾಗತಿಕ ಆಟಗಾರನಾಗಿ ಹೊರಹೊಮ್ಮಲು ಸಹಾಯ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.