ಬೆಂಗಳೂರು: ಹತ್ತನೇ ತರಗತಿ, ಪಿಯುಸಿ, ಪದವಿ, ಎಂಜಿನಿಯರಿಂಗ್, ಐಟಿಐ ಸೇರಿದಂತೆ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿದ ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಲಾಗಿರುವ ಉದ್ಯೋಗ ಮೇಳದಲ್ಲಿ ಒಂದು ಲಕ್ಷ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಸೋಮವಾರದಿಂದ ಆರಂಭವಾಗಿರುವ ಯುವ ಸಮೃದ್ಧಿ ಬೃಹತ್ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರಿಗೆ ಸ್ಥಳದಲ್ಲೇ ಉದ್ಯೋಗ ಕೊಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಲ್ಲೊಂದಾಗಿತ್ತು. ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕರು ಮತ್ತು ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗ ನೀಡುವ ಯುವ ಜನ ಸಮೃದ್ಧಿ ಸಮ್ಮೇಳನ ಕರ್ನಾಟಕದ ಮಟ್ಟಿಗೆ ಒಂದು ಚಾರಿತ್ರಿಕ ದಾಖಲೆಯಾಗಲಿದೆ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಉದ್ಯೋಗ ಮೇಳದಲ್ಲಿ 75 ಸಾವಿರ ಮಂದಿ ನೋಂದಣಿಯಾಗಿರುವುದು ದೇಶದಲ್ಲೇ ಐತಿಹಾಸಿಕ ದಾಖಲೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರದವರೆಗೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವವರು ಮೇಳದಲ್ಲಿ ಭಾಗವಹಿಸಿದ್ದಾರೆ. ಒಂದು ಲಕ್ಷ ಉದ್ಯೋಗಗಳ ನೇಮಕಾತಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿವೆ. ಇದು ದಾಖಲೆಯೇ ಸರಿ ಎಂದು ಪಾಟೀಲ್ ಪ್ರಶಂಸಿದರು.
ಯುವ ನಿಧಿ ಅಡಿ ನೋಂದಣಿಯಾಗಿರುವವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನೆಪ ಮಾತ್ರಕ್ಕೆ ಉದ್ಯೋಗ ಮೇಳ ನಡೆಸುತ್ತಿಲ್ಲ. ಎಲ್ಲರಿಗೂ ಉದ್ಯೋಗ ಕೊಡಿಸಲಾಗುತ್ತಿದೆ. ಉದ್ಯೋಗ ಸಿಗದೇ ಇದ್ದ ನೋಂದಾಯಿತರ ದತ್ತಾಂಶಗಳ ಮೇಲೆ ನಿಗಾ ಇಡಲಾಗುವುದು. ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ತರಬೇತಿ ಹಾಗೂ ಕೌಶಲ್ಯಾಭಿವೃದ್ದಿಗೆ ಆದ್ಯತೆ ನೀಡಲಾಗುವುದು. ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಮಾದರಿಯಾಗಿ ನಿರುದ್ಯೋಗ ನಿವಾರಣೆಗೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪಾಟೀಲ್ ಭರವಸೆ ನೀಡಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಯುವ ಸಮೃದ್ಧಿ ಲಾಂಛನವನ್ನು ಅನಾವರಣಗೊಳಿಸಲಾಯಿತು.