ನವದೆಹಲಿ: ಜ್ಞಾನವಾಪಿ ದೇವಾಲಯ ಪ್ರಕರಣ ಸಂಬಂಧ ಹಿಂದೂ ಪಕ್ಷಕ್ಕೆ ಮತ್ತೊಮ್ಮೆ ಗೆಲುವಾಗಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ (Vyas Tehkhana)ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ.
ಜ್ಞಾನವಾಪಿ ದೇಗುಲ ಸಂಕೀರ್ಣದಲ್ಲಿರುವ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಜ್ಞಾನವಾಪಿ ಮಸೀದಿ ಸಮಿತಿಯ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ಮತ್ತು ಸಂಬಂಧಪಟ್ಟ ಕಕ್ಷಿದಾರರ ವಾದಗಳನ್ನು ಪರಿಗಣಿಸಿದ ನಂತರ, ಜಿಲ್ಲಾ ನ್ಯಾಯಾಧೀಶರು ದಿನಾಂಕ 17.01.2024 ರಂದು ವಾರಣಾಸಿಯ ಡಿಎಂ ಅನ್ನು ಆಸ್ತಿಯ ಸ್ವೀಕೃತಿದಾರರನ್ನಾಗಿ ನೇಮಿಸಿದ ಹಾಗೂ 31.01.2024 ರ ಆದೇಶದಂತೆ ಜಿಲ್ಲಾ ನ್ಯಾಯಾಲಯವು ತೆಹ್ಖಾನಾದಲ್ಲಿ ಪೂಜೆಗೆ ಅನುಮತಿ ನೀಡಿದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯವು ಯಾವುದೇ ಕಾರಣವನ್ನು ಕಂಡುಕೊಂಡಿಲ್ಲ ಎಂದು ತೀರ್ಪಿನಲ್ಲಿ ಪ್ರಕಟಿಸಿದೆ.
ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ ಹಿಂದೂ ಪರ ವಕೀಲ ಪ್ರಭಾಶ್, ಇದು ಸನಾತನ ಧರ್ಮಕ್ಕೆ ಸಂದ ದೊಡ್ಡ ವಿಜಯವಾಗಿದೆ ಎಂದಿದ್ದಾರೆ.
ಈ ತೀರ್ಪಿನಿಂದಾಗಿ ವ್ಯಾಸ್ ತೆಹ್ಖಾನಾದಲ್ಲಿ ನಡೆಸಲಾಗುತ್ತಿರುವ ಪೂಜೆ ನಿರ್ವಿಘ್ನವಾಗಿ ಸಾಗಲಿದೆ.