ಕೊಚ್ಚಿ: ವಯನಾಡು ಜಿಲ್ಲೆಯ ಮನಂತವಾಡಿ ತಾಲೂಕಿನ ಕಲ್ಲೋಡಿಯ ಸೇಂಟ್ ಜಾರ್ಜ್ ಫೊರೇನ್ ಚರ್ಚ್ಗೆ ಅಂದಾಜು 5.5358 ಹೆಕ್ಟೇರ್ (ಸುಮಾರು 14 ಎಕರೆ) ಭೂಮಿಯನ್ನು ಎಕರೆಗೆ 100 ರೂನಂತೆ ಮಂಜೂರು ಮಾಡಿದ ರಾಜ್ಯ ಸರ್ಕಾರದ ವಿವಾದಾತ್ಮಕ ಕ್ರಮವನ್ನು ಕೇರಳ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
2015 ರಲ್ಲಿ ಆಗಿನ ಯುಡಿಎಫ್ ಸರ್ಕಾರವು ತೆಗೆದುಕೊಂಡ ಈ ನಿರ್ಧಾರವು ಆಕ್ರೋಶವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಕೃಷಿ ಮತ್ತು ವಸತಿ ಭೂಮಿಗಾಗಿ ಕಾಯುತ್ತಿರುವ ಹಲವಾರು ಬುಡಕಟ್ಟು ಸಮುದಾಯಗಳ ತುರ್ತು ಅಗತ್ಯಗಳ ಸಂದರ್ಭದಲ್ಲಿ ಸರ್ಕಾರದ ಈ ನಡೆ ವಿರೋಧಕ್ಕೆ ಕಾರಣವಾಗಿದೆ.
“ಇಂದೂ ಕೂಡಾ ಹಲವಾರು ಆದಿವಾಸಿಗಳು ಕೃಷಿ ಉದ್ದೇಶಗಳಿಗಾಗಿ ಒಂದು ತುಂಡು ಭೂಮಿಯನ್ನು ಪಡೆಯಲು ಮತ್ತು ತಮ್ಮದೇ ಆದ ರೀತಿಯಲ್ಲಿ ತಮ್ಮ ಜಮೀನಿನಲ್ಲಿ ಕನಸಿನ ಮನೆಯನ್ನು ನಿರ್ಮಿಸಲು ಕಾಯುತ್ತಿದ್ದಾರೆ. ಆದಿವಾಸಿಗಳು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು ಮತ್ತು ಅವರ ಮುಖದಲ್ಲಿ ಸುಂದರ ನಗು ಎಂದೆಂದಿಗೂ ಇರುವಂತೆ ನೋಡಿಕೊಳ್ಳುವುದು ರಾಜ್ಯ ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಹೇಳಿದ್ದಾರೆ.
ನೂರಾರು ಬುಡಕಟ್ಟು ಜನರು ಆಶ್ರಯಕ್ಕಾಗಿ ಭೂಮಿಯನ್ನು ಪಡೆಯಲು ಕಾಯುತ್ತಿರುವಾಗ ಅಲ್ಪ ಮೊತ್ತಕ್ಕೆ ಭೂಮಿಯ ಮಾರಾಟವನ್ನು ನಿಗದಿಪಡಿಸಿದ ವಿಚಿತ್ರ ಪ್ರಕರಣ ಎಂದು ನ್ಯಾಯಾಲಯವು ಬಣ್ಣಿಸಿದೆ.
ಇದು ಕಾನೂನುಬಾಹಿರ ಮಾತ್ರವಲ್ಲ, ಅರ್ಜಿದಾರರು ಸೇರಿದಂತೆ ಆದಿವಾಸಿಗಳ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ವಯನಾಡಿನಲ್ಲಿ ಸದಾ ನಗುನಗುತ್ತಿರುವ ಮುಗ್ಧ ಬುಡಕಟ್ಟು ಜನರ ಹೃದಯಕ್ಕೆ ಚಾಕು ಚುಚ್ಚುವುದಲ್ಲದೆ ಬೇರೇನೂ ಅಲ್ಲ. ಈ ಅಕ್ರಮಗಳ ಬಗ್ಗೆ ನ್ಯಾಯಾಲಯ ಕಣ್ಣು ಮುಚ್ಚುವಂತಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಎರಡು ತಿಂಗಳೊಳಗೆ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಣಯಿಸಲು ಮತ್ತು ಆಸ್ತಿಯನ್ನು ಖರೀದಿಸಲು ಚರ್ಚ್ ಸಿದ್ಧವಾಗಿದೆಯೇ ಎಂದು ಕಂಡುಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾನಂತವಾಡಿಯ ಕೆ ಮೋಹನ್ದಾಸ್ ಸೇರಿದಂತೆ ಬುಡಕಟ್ಟು ಸಮುದಾಯದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. 1962 ರಿಂದ ಚರ್ಚ್ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಯುಡಿಎಫ್ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರ 2015 ರಲ್ಲಿ ಎಕರೆಗೆ 100 ರೂಪಾಯಿ ವೆಚ್ಚದಲ್ಲಿ ಪಟ್ಟಾ ಮಂಜೂರು ಮಾಡಲು ಆದೇಶಿಸಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಚರ್ಚ್ ವಶದಲ್ಲಿರುವ ಆಸ್ತಿಯ ಮಾರುಕಟ್ಟೆ ಮೌಲ್ಯವು 2015 ರ ಹೊತ್ತಿಗೆ ಸುಮಾರು 3,04,96,403 ರೂ.ಆಗಿದೆ.