ಎಂಜಿಎಂ ಕಾಲೇಜು ಮೈದಾನದಲ್ಲಿ ‘ಬಿಲ್ಡ್ ಟೆಕ್’ -2024: ಕಟ್ಟಡ ಸಾಮಗ್ರಿಗಳ ಬೃಹತ್ ವಸ್ತು ಪ್ರದರ್ಶನಕ್ಕೆ ಚಾಲನೆ

ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಮತ್ತು ಬೆಂಗಳೂರಿನ ಯು.ಎಸ್ ಕಮ್ಯೂನಿಕೇಶನ್ಸ್ ವತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ ‘ಬಿಲ್ಡ್ ಟೆಕ್-2024’ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಕ್ರೆಡೈ ಉಡುಪಿ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ಮನೆ, ಕಟ್ಟಡಗಳನ್ನು ನಿರ್ಮಿಸಲು ಸಾಕಷ್ಟು ಕಷ್ಟ ಎದುರಿಸುವುದರೊಂದಿಗೆ ಸಮಯದ ಅಭಾವವೂ ಎದುರಾಗುತ್ತಿತ್ತು. ಆದರೆ ಪ್ರಸ್ತುತ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕಟ್ಟಡ, ಮನೆಗಳ ನಿರ್ಮಾಣ ಅತ್ಯಂತ ಸುಲಭವಾಗಿದೆ. ಕಟ್ಟಡ ನಿರ್ಮಾಣಕ್ಕೆಬೇಕಾದ ಎಲ್ಲ ಬಗೆಯ ಸಾಮಗ್ರಿಗಳನ್ನು ಒಟ್ಟುಗೂಡಿಸಲು ಹೆಚ್ಚು ಕಷ್ಟವಾಗುವುದಿಲ್ಲ. ಪ್ರಸ್ತುತ ಜನತೆಗೆ ಅವರ ಕನಸಿನ ಮನೆ ಕಟ್ಟಲು ವಿನ್ಯಾಸಗಾರರು, ವಾಸ್ತುತಜ್ಞರು, ಕಟ್ಟಡ ಸಾಮಗ್ರಿಗಳು, ಕಾರ್ಮಿಕರು ಇತ್ಯಾದಿ ಎಲ್ಲ ರೀತಿಯ ಸಹಾಯ ಸಹಕಾರ ಅತ್ಯಂಂತ ಸುಲಭವಾಗಿ ದೊರಕುತ್ತಿದೆ. ಜನರಿಗೆ ಇದರಿಂದ ಇನ್ನಷ್ಟು ಪ್ರಯೋಜನವಾಗಬೇಕು ಎನ್ನುವ ನೆಲೆಯಲ್ಲಿ ಉಡುಪಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನದಲ್ಲಿ ಎಲ್ಲ ಸಾಮಗ್ರಿಗಳೊಂದಿಗೆ ಮಾಹಿತಿ ದೊರಕಲಿದೆ. ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಾಂಡವಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ ಎಂಡಿ ಡಾ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ಹಿಂದೆ ಕಟ್ಟಡ ಸಾಮಗ್ರಿಗಳಿಗಾಗಿ ದೂರದ ಪಟ್ಟಣಗಳಿಗೆ ತೆರಳಬೇಕಿತ್ತು. ಆದರೆ ಈಗ ನಮ್ಮ ಕಾಲ ಬುಡದಲ್ಲೇ ಎಲ್ಲ ಬಗೆಯ ಸಾಮಗ್ರಿಳು ದೊರಕುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಸೋಸಿಯೇಶನ್ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ ಮಾತನಾಡಿ, ಒಂದೇ ಸೂರಿನಡಿ ಎಲ್ಲ ಬಗೆಯ ಉತ್ತಮ ಗುಣಮಟ್ಟದ ಸಾಮಗ್ರಿಗಳು ದೊರಕುತ್ತಿದ್ದು, ಎಲ್ಲರಿಗೂ ಅನುಕೂಲವಾಗಿದೆ ಎಂದು ತಿಳಿಸಿದರು.

ಶಾಂತಾ ಎಲೆಕ್ಟ್ರಿಕಲ್ಸ್ ಆ್ಯಂಡ್ ಎಂಜಿನಿಯರಿಂಗ್‌ನ ಎಂಡಿ ಶ್ರೀಪತಿ ಭಟ್ ಮಾತನಾಡಿ, ಮೂರು ದಿನ ನಡೆಯಲಿರುವ ಪ್ರದರ್ಶನದ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಉಜ್ವಲ್ ಡೆವಲಪರ್ಸ್ ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಅಸೋಸಿಯೇಶನ್ ಮಾಜಿ ಅಧ್ಯಕ್ಷ ಗೋಪಾಲ ಎಂ. ಭಟ್, ಯು.ಎಸ್. ಕಮ್ಯೂನಿಕೇಶನ್ಸ್ ನ ಉಮಾಪತಿ, ಕೋಶಾಧಿಕಾರಿ ಲಕ್ಷ್ಮೀ ನಾರಾಯಣ ಉಪಾಧ್ಯ, ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಅಸೋಸಿಯೇಶನ್ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ. ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಯೋಗೀಶ್ಚಂದ್ರಧರ ವಂದಿಸಿದರು. ಅರ್ಚನಾ ಪ್ರೊಜೆಕ್ಟ್ಸ್ ‌ನ ಪಾಲುದಾರ ಅಮಿತ್ ಅರವಿಂದ್ ನಿರೂಪಿಸಿದರು.

ಮೂರು ದಿನಗಳ ಪ್ರದರ್ಶನ

ಫೆ. 25ರ ವರೆಗೆ ಪ್ರದರ್ಶನ ನಡೆಯಲಿದ್ದು, ವಿವಿಧ ಕಂಪೆನಿಗಳ ಬಾಗಿಲುಗಳು, ಕಿಟಕಿಗಳು, ಬಾತ್‌ರೂಂ ಫಿಟ್ಟಿಂಗ್, ಗ್ಲಾಸ್ ಆ್ಯಂಡ್ ಗ್ಲಾಸ್ ಫಿಟ್ಟಿಂಗ್, ಟೈಲ್‌ ಗಳು, ಸ್ಯಾಾನಿಟರಿ ಆ್ಯಂಡ್ ಪ್ಲಂಬಿಂಗ್, ಸ್ವಿಚ್ಚು ಗಳು, ಎಲೆಕ್ಟ್ರಿಕಲ್ ಫಿಟ್ಟಿಂಗ್, ಕನ್‌ಸ್ಟ್ರಕ್ಷನ್ ಟೆಕ್ನಾಲಜೀಸ್, ಸೋಲಾರ್ ಉತ್ಪನ್ನಗಳು, ಫ್ಲೋರಿಂಗ್ ಮತ್ತು ರೂಫಿಂಗ್‌ಗೆ ಸಂಬಂಧಿಸಿದ ಉತ್ಪನ್ನಗಳು, ಪೈಂಟ್‌ ಗಳು ಹಾಗೂ ವಾಟರ್ ಪ್ರೂಫ್ ಕೆಮಿಕಲ್‌, ಸ್ಟೀಲ್, ಸಿಮೆಂಟ್, ಫ್ಲೈವುಡ್, ಸೇಫ್ಟಿ ಮತ್ತು ಮೆಷಿನರಿ ಇಕ್ವಿಪ್‌ಮೆಂಟ್‌, ಎಲಿವೇಟರ್‌ಗೆ ಸಂಬಂಧಿಸಿದ ಕಂಪೆನಿಗಳು, ಇಂಟಿರೀಯರ್‌ ಸಲುವಾಗಿ ವಿವಿಧ ಸೋಫಾ, ಡೈನಿಂಗ್ ಟೇಬಲ್, ಕಿಚನ್ ಸೆಟ್‌ಗಳ ಮಳಿಗೆಗಳು ತೆರೆಯಲ್ಪಟ್ಟಿದ್ದು, ಗ್ರಾಾಹಕರಿಗೆ ವೈವಿಧ್ಯಮಯ ಕಂಪೆನಿಗಳ ವಿವಿಧ ವಿನ್ಯಾಸದ ಕಟ್ಟಡ ಸಾಮಗ್ರಿಗಳ ಬಗ್ಗೆ ಸ್ಥೂಲವಾದ ಮಾಹಿತಿ ಒದಗಿಸಲಿದ್ದಾರೆ.