ಉಡುಪಿ: ಸಶಸ್ತ್ರ ಮೀಸಲು ಪೊಲೀಸ್ ಉಡುಪಿ 1999ರ ತಂಡ ಇವರ ರಜತ ಸಂಭ್ರಮದ ಪ್ರಯುಕ್ತ, ಕೆ.ಎಂ.ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಡಿಎಆರ್ ಕೇಂದ್ರ ಕಛೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ರಕ್ತದಾನದ ಬಗ್ಗೆ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಐಪಿಎಸ್ ಮಾತನಾಡಿ, ರಕ್ತ ಸಂಗ್ರಹ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಇಲಾಖಾ ವತಿಯಿಂದ ರಕ್ತದಾನ ಶಿಬಿರ ನಡೆಸುವಂತೆ ಸಲಹೆ ನೀಡಿದರು.
ರಕ್ತದಾನ ಮಾಡುವದರಿಂದ ಯಾವುದೇ ತೊಂದರೆ ಆಗಲಾರದು, ಓರ್ವ ವ್ಯಕ್ತಿಗೆ ಅತೀ ಅವಶ್ಯಕ ಸಂದರ್ಭದಲ್ಲಿ ರಕ್ತ ನೀಡುವದರಿಂದ ಮರುಜೀವ ನೀಡಿದಂತಾಗುವುದು. ಅಲ್ಲದೆ, ಇದರಿಂದ ಪೊಲೀಸರ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಿದಂತಾಗುವುದು ಎಂದು ತಿಳಿಸಿದರು.
25 ವರ್ಷಗಳ ಪೊಲೀಸ್ ಸೇವೆ ಅಭಿನಂದಿಯವಾಗಿದ್ದು ಸಮಾಜಕ್ಕೆ ನೀಡಿರುವ ಸೇವೆಯೊಂದಿಗೆ ರಕ್ತದಾನದ ಕಾರ್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದ್ದು ಈ ಮೂಲಕ ಸಮಾಜಕ್ಕೆ ಮಾದರಿಯಾಗಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ದಲಿಂಗಪ್ಪ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆ.ಎಂ.ಸಿ ಮಣಿಪಾಲ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ. ಶಮ್ಮಿ ಶಾಸ್ತ್ರೀ ಭಾಗವಹಿಸಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಿಎಆರ್ ಡಿವೈಎಸ್ಪಿ ತಿಮ್ಮಪ್ಪ ಗೌಡ ಜಿ ಉಪಸ್ಥಿತರಿದ್ದರು.
ಡಿಎಆರ್ ಆರ್ ಪಿ ಐ ಎಸ ರವಿಕುಮಾರ್ ಸ್ವಾಗತಿಸಿ ಡಿ ಎ ಆರ್ ಎ ಆರ್ ಎಸ್ ಐ ಬಾಲಸುಬ್ರಹ್ಮಣ್ಯ ವಂದಿಸಿದರು. ಯೋಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಡಿಎಆರ್ ಕೇಂದ್ರ ಕಚೇರಿಯ ಸುಮಾರು 80 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ರಕ್ತದಾನ ಮಾಡಲಾಯಿತು. ತಮ್ಮ ಇಪ್ಪತೈದು ವರುಷಗಳ ಸೇವೆಯ ಸಾರ್ಥಕತೆ ಮೆರೆಯುವ ನಿಟ್ಟಿನಲ್ಲಿ ಇಂತಹ ಸಮಾಜಮುಖಿ ಕಾರ್ಯ ನಡೆಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.












