ಕೌಟುಂಬಿಕ ಹಿಂಸೆಯಿಂದ ನೊಂದ ಮಹಿಳೆಯರಿಗೆ ಕಾನೂನಿನ ನೆರವು ನೀಡಿ: ನ್ಯಾ. ಶಾಂತವೀರ ಶಿವಪ್ಪ

ಉಡುಪಿ: ಕೌಟುಂಬಿಕೆ ಹಿಂಸೆಯಿಂದ ನೊಂದ ಮಹಿಳೆಯರಿಗೆ ಇಲಾಖೆಗಳು ಹಾಗೂ ಸಂಸ್ಥೆಗಳು ಸಾಂತ್ವನ
ಹೇಳುವುದರ ಜೊತೆಗೆ ಕಾನೂನಿನ ನೆರವು, ವೈದ್ಯಕೀಯ ಸೌಲಭ್ಯ ಮತ್ತಿತರ ಸಹಾಯವನ್ನು ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶಾಂತವೀರ ಶಿವಪ್ಪ ಹೇಳಿದರು.


ನಗರದ ಜಿಲ್ಲಾ ನ್ಯಾಯಾಲಯದ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಆಯೋಜಿಸಿದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಕಾಯ್ದೆಯ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತು ಓರಿಯೆಂಟೇಶನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿ ಸಹಾಯ ಕೋರಿ ಬರುವಂತಹ ಮಹಿಳೆಯರಿಗೆ ಕಾಯ್ದೆ ಅನುಷ್ಠಾನ ಭಾಗೀದಾರರು ಪ್ರಕರಣಗಳ ತೀವ್ರತೆಗೆ ಅನುಗುಣವಾಗಿ ಸೇವಾ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಅವುಗಳಲ್ಲಿ ಸತ್ಯಾಸತ್ಯತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಿಹಾರ ಒದಗಿಸಬೇಕು. ಕೆಲವೊಮ್ಮೆ ಸುಳ್ಳು ಪ್ರಕರಣಗಳು ಆಗುವ ಸಾಧ್ಯತೆ ಇರುತ್ತದೆ ಎಂದರು.

ನೊಂದ ಮಹಿಳೆಯರಿಗೆ ಸಂರಕ್ಷಣೆ ಕೊಡಲು ಜಾರಿಗೆ ತಂದಿರುವ ಕಾಯಿದೆಗಳನ್ನು ತ್ವರಿತವಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸಂಬಂಧಪಟ್ಟ ಇಲಾಖೆಗಳು ವರದಿಗಳನ್ನು ಶೀಘ್ರವಾಗಿ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ದುರ್ಬಲ ವರ್ಗದವರಾದ ಮಹಿಳೆಯರನ್ನು ಸಂರಕ್ಷಣೆ ಮಾಡಲು ಸರಕಾರ ಅನೇಕ ಕಾಯಿದೆಗಳನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಮಹಿಳೆಯರು ಸಾಕಷ್ಟು ಹಿಂಸೆಯನ್ನು ತಡೆದುಕೊಂಡು ತಮ್ಮ ಕುಟುಂಬದ ಗೌರವವನ್ನು ಎತ್ತಿಹಿಡಿಯಲು ಮುಂದಾಗುತ್ತಾರೆ. ಹಿಂಸೆ ಅತಿಯಾದಾಗ ಮಾತ್ರ ಅವರು ರಕ್ಷಣೆ ಕೋರಿ
ಬರುತ್ತಾರೆ ಎಂದರು.

ನೊಂದ ಮಹಿಳೆಯರಿಗೆ ಪೊಲೀಸ್ ಹಾಗೂ ಸಾಂತ್ವನ ಕೇಂದ್ರಗಳು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ನೆರವನ್ನು ಒದಗಿಸಬೇಕುಎಂದ ಅವರು, ಮಹಿಳೆಯರಿಗೆ ದೈಹಿಕ ಹಿಂಸೆಗಿಂತ ಮಾನಸಿಕ ಹಿಂಸೆ ಹೆಚ್ಚು ತೊಂದರೆ ಉಂಟುಮಾಡುತ್ತದೆ. ಇದಕ್ಕೆ ಸರಿಯಾದ ರೀತಿಯಲ್ಲಿ ಆಲಿಸಿ, ಅವರಿಗೆ ಪರಿಹಾರ ಒದಗಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ, ಅರುಣ್ ಕೆ, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ನ್ಯಾಯಾಧೀಶರುಗಳಾದ ಜೀತು ಆರ್.ಎಸ್. ವಿಘ್ನೇಶ್ ಕುಮಾರ್, ಹಿರಿಯ ನ್ಯಾಯವಾದಿ ಬಿ. ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ನಿರೂಪಿಸಿದರೆ, ಲತಾ ನಾಯಕ್ ವಂದಿಸಿದರು.