ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಬುಧವಾರ ವಿಧಾನಸಭೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕ(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. 1 ಕೋಟಿಗೂ ಹೆಚ್ಚು ಆದಾಯವಿರುವ ದೇವಸ್ಥಾನಗಳ ಆದಾಯದ ಶೇ 10ರಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮಸೂದೆಯಲ್ಲಿ ಕಡ್ಡಾಯಗೊಳಿಸಲಾಗಿದೆ.
ಈ ಮಸೂದೆಯ ಬಗ್ಗೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ವಿರೋಧ ಪಕ್ಷ ಬಿಜೆಪಿ ಟೀಕಿಸಿದೆ. ರಾಜ್ಯ ಸರ್ಕಾರವು “ಹಿಂದೂ ವಿರೋಧಿ ನೀತಿಗಳಲ್ಲಿ” ತೊಡಗಿಸಿಕೊಂಡಿದೆ ಮತ್ತು ಹಣದ ದುರುಪಯೋಗವಾಗುವುದು ನಿಶ್ಚಿತ ಎಂದು ಆರೋಪಿಸಿದೆ.
ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಈ ಮಸೂದೆಯ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ “ಖಾಲಿ ಬೊಕ್ಕಸ” ತುಂಬಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರವು ಹಿಂದೂ ದೇವಾಲಯಗಳಿಂದ ಮಾತ್ರ ಆದಾಯವನ್ನು ಏಕೆ ಸಂಗ್ರಹಿಸುತ್ತಿದೆ ಮತ್ತು ಇತರ ಧಾರ್ಮಿಕ ಕೇಂದ್ರಗಳಿಂದ ಏಕೆ ಸಂಗ್ರಹಿಸುತ್ತಿಲ್ಲ ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ.
ಇದಲ್ಲದೆ, ತಿದ್ದುಪಡಿ ಮಸೂದೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಿಂದೂಯೇತರರನ್ನು ನೇಮಿಸುವ ಅಂಶವನ್ನೂ ಬಿಜೆಪಿ ಟೀಕಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಕಾಂಗ್ರೆಸ್ ನಡೆಯ ಬಗ್ಗೆ ಕೆಂಡಕಾರಿದ್ದಾರೆ.