ಅಕ್ಷಯ್‌ ಕಲ್ಲೇಗ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆ: ನಾಲ್ವರ ಬಂಧನ

ಪುತ್ತೂರು: ಕಲ್ಲೇಗ ಟೈಗರ್ಸ್‌ ಹುಲಿ ವೇಷ ತಂಡದ ಮುಖ್ಯಸ್ಥ ಅಕ್ಷಯ್‌ ಕಲ್ಲೇಗ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ನಿವಾಸಿ ಕಿಶೋರ್‌ ಕಲ್ಲಡ್ಕ (26), ಪುತ್ತೂರಿನ ಮನೋಜ್‌ (23), ಆಶಿಕ್‌ (28) ಹಾಗೂ ಸನತ್‌ ಕುಮಾರ್‌ (24) ಎಂಬುವವರೇ ಬಂಧಿತ ಆರೋಪಿಗಳು.

ಆರೋಪಿ ಮನೀಶ್‌ ಸಹೋದರ ಮನೋಜ್‌ ಎಂಬುವವರಿಗೆ ಅಕ್ಷಯ್‌ ಕಲ್ಲೇಗ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳುವ ಬೆದರಿಕೆ ಕರೆ ಮಾಡಿರುವ ಕಾರಣ ಮನೋಜ್‌, ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ನಿನ್ನ ತಮ್ಮ ಮನೀಶ್‌ ಹಾಗೂ ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ. ನಿನ್ನನ್ನು ಬಿಡಲ್ಲ ಎಂದು ಫೋನ್‌ ಕರೆ ಮಾಡಿದ್ದಾಗಿಯೂ, ನಂತರ ಮನೋಜ್‌ ಚಲನವಲನಗಳನ್ನು ದುಷ್ಕರ್ಮಿಗಳ ತಂಡ ಗಮನಿಸುತ್ತಿದ್ದಾಗಿಯೂ, ಅದರಂತೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳ ತಂಡ ತಲ್ವಾರ್‌ ಸಹಿತ ಅವಿತು ಕುಳಿತಿತ್ತು. ಇದೀಗ ಪೊಲೀಸರು ಕಾರು, ತಲ್ವಾರ್‌ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಲ್ಲೇಗದಲ್ಲಿ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್‌ ಮುಖ್ಯಸ್ಥ ಅಕ್ಷಯ್‌ ಕಲ್ಲೇಗ (26) ಕಳೆದ ವರ್ಷ ನವೆಂಬರ್‌ 6 ರಂದು ಹತ್ಯೆ ಮಾಡಲಾಗಿತ್ತು. ಈ ಕೊಲೆಗೆ ಸಂಬಂಧಪಟ್ಟಂತೆ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು.

ಸದ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೇತನ್‌, ಮನೀಶ್‌, ಮಂಜ, ಕೇಶವ ಪಡೀಲು ನ್ಯಾಯಾಂಗ ಬಂಧನದಲ್ಲಿದ್ದಾರೆ.