ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಮಾ.14ಕ್ಕೆ ಮುಂದೂಡಿದೆ.
ಕೆಲ ತಿಂಗಳುಗಳ ಹಿಂದೆ ಮಸೀದಿ ಕಟ್ಟಡದಲ್ಲಿ ದೇವಸ್ಥಾನದ ಕುರುಹುಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಮಾದರಿಯಲ್ಲಿ ಉತ್ಖನನ ಹಾಗೂ ಸರ್ವೇ ನಡೆಸುವಂತೆ ವಿಶ್ವಹಿಂದೂ ಪರಿಷತ್ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಬಳಿಕ ಈ ಪ್ರಕರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಮಸೀದಿ ಇರುವ ಜಾಗ ವಕ್ಫ್ ಆಸ್ತಿ ಹೌದೋ ಅಲ್ಲವೋ ಎಂಬುದನ್ನು ಜಿಲ್ಲಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಅದರಂತೆ ಮಂಗಳೂರಿನ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು. ವಿಎಚ್‌ಪಿ ಪರ ವಕೀಲರು ವಾದ ಮಂಡಿಸಿದರು. ಹೈಕೋರ್ಟ್ ಆದೇಶ ಪ್ರತಿ ದೊರೆಯದೆ ಇರುವುದರಿಂದ ಮಸೀದಿ ಪರ ವಕೀಲರು ಸಮಯಾವಕಾಶ ಕೇಳಿದರು. ಹಾಗಾಗಿ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿದ್ದಾರೆ.