ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳಿ: ಮಂಜುನಾಥ್

ಉಡುಪಿ: ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಜತೆಗೆ ಸಾರ್ವಜನಿಕ ಜೀವನಕ್ಕೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿ ಕೊಳ್ಳಬೇಕು, ಎಂದು ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಹೇಳಿದರು.
ಅವರು ಶುಕ್ರವಾರ ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಾರ್ಲಿಮೆಂಟ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಲಾ‌ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಘಟನೆ ಕೇವಲ ಶಾಲಾ ವಾರ್ಷಿಕೋತ್ಸವಕ್ಕೆ ಮಾತ್ರ ಸೀಮಿತವಾಗಿದ್ದು, ಕಲಿಕೆಯ ಒತ್ತಡಗಳಿಂದ ಇತರ ಚಟುವಟಿಕೆಗಳನ್ನು ಆಯೋಜನೆ ಮಾಡುವುದು ಕಷ್ಟಕರ. ಆದರೆ ಸಾರ್ವಜನಿಕ ಸಂಘಟನೆಗಳ
ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು  ಎಂದರು.
ರಾಜಕೀಯ ಕ್ಷೇತ್ರದಲ್ಲಿ ಇತ್ತೀಚಿಗೆ ದೇಶದಲ್ಲಿ ಬಾರಿ ಬದಲಾವಣೆ ಕಾಣುತ್ತಿದ್ದು, ಮೌಲ್ಯಾಧಾರಿತ ರಾಜಕೀಯದ ಪರಿಕಲ್ಪನೆ ಅನಾವರಣ ಗೊಳ್ಳುತ್ತಿದೆ. ಕೆಲವೇ ವರ್ಷಗಳ ಹಿಂದೆ ಜನಪ್ರತಿನಿಧಿಗಳನ್ನು ಅಸ್ಪ್ರಶ್ಯರಂತೆ ನೋಡುವ ಪ್ರತೀತಿ ಇಂದು ಕೊನೆಗೊಂಡಿದ್ದು ಯುವ‌ ಜನತೆ ಹೆಚ್ಚು ಹೆಚ್ಚು ಸಾರ್ವಜನಿಕ ಕ್ಷೇತ್ರದಲ್ಲಿ ಆಕರ್ಷಿತರಾಗುತ್ತಿದ್ದಾರೆ.
ಕಾಲೇಜು ಸಂಸತ್ತು ವಿದ್ಯಾರ್ಥಿಗಳಿಗೆ ಭವಿಷ್ಯದ ನಾಯಕರಾಗಲು ತರಬೇತಿ ಅವಧಿಯಾಗಿದ್ದು ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲೆ ರೂಪ ಎಲ್ ಭಟ್ ರವರು ಮಾತನಾಡಿ, ವಿದ್ಯಾರ್ಥಿ ಸಂಘಗಳು ಆಯೋಜನೆ ಮಾಡುವಂತಹ ಕಾರ್ಯಕ್ರಮಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬೇಕು. ಆ ನಿಟ್ಟಿನಲ್ಲಿ ಸಂಘಟನೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ಕಾಲೇಜಿನ ವತಿಯಿಂದ ನೀಡಲಾಗುವುದು ಎಂದು ಹೇಳಿದರು.
ಕಾಲೇಜು ಸಂಸತ್ತಿನ ನೂತನ ಅಧ್ಯಕ್ಷ ಯಶ್ ಪೂಜಾರಿ, ಉಪಾಧ್ಯಕ್ಷೆ ಸಾಧನಾ, ಕಾರ್ಯದರ್ಶಿ ರುಚಿತಾ, ಜೊ. ಕಾರ್ಯದರ್ಶಿ ಸಾಗರ್, ಕ್ರೀಡಾ ಮತ್ತು ಸಾಂಸ್ಕ್ರತಿಕ ಕಾರ್ಯದರ್ಶಿಗಳಾದ ರಶ್ಮಿ ಮತ್ತು ವನಿತಾ, ವಿಘ್ನೇಶ್ ಉಪಸ್ಥಿತರಿದ್ದರು. ರಕ್ಷಾ ಗುಜರಾನ್ ಸ್ವಾಗತಿಸಿ, ನೇಹಾ ವಂದಿಸಿದರು. ಮೊಹಿಕಾ ನಿರೂಪಿಸಿದರು.