ಉಡುಪಿ: “ಅನ್ವೇಷಣಾ–2024” ಎಂಬ ಸ್ಪರ್ಧೆಯು “ಆವಿಷ್ಕಾರಗಳಿಗೆ ಸೇತುವೆ ನಿರ್ಮಾಣ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಸಿನೋಪ್ಸಿಸ್, ಅಗಸ್ತ್ಯ ಅಂತರಾಷ್ಟ್ರೀಯ ಫೌಂಡೇಶನ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿಯಾಗಿ ಈ ಸ್ಪರ್ಧೆಯನ್ನು ಪ್ರಾಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತೀ ತಂಡದ ನಾಲ್ಕು ವಿದ್ಯಾರ್ಥಿಗಳಲ್ಲಿ ಇಬ್ಬರು ಸಮೀಪದ ಫ್ರೌಢಶಾಲೆಯ ವಿದ್ಯಾರ್ಥಿಗಳಾಗಿರಬೇಕು ಎಂಬ ನಿಯಮವು ಫ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಕರ್ನಾಟಕ ರಾಜ್ಯದ ನಾಲ್ಕು ವಲಯಗಳಲ್ಲಿ ಮೊದಲ ಹಂತದ ಸ್ಪರ್ಧೆ ನಡೆಸಿ ಅದರಲ್ಲಿ ವಿಜೇತರಾದ ತಂಡಗಳು ಫೆಬ್ರವರಿ 27 ರಿಂದ 29ರ ತನಕ ಬೆಂಗಳೂರಿನಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.
ವಲಯ ಮಟ್ಟದ ಸ್ಪರ್ಧೆಯು ಫೆ.13 ಮತ್ತು 14 ರಂದು ಧಾರವಾಡದ ಶ್ರೀ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ದಕ್ಷಿಣ ವಲಯದಿಂದ 40 ತಂಡಗಳು ಭಾಗವಹಿಸಿದ್ದು ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೊದಲ ಐದು ವಿಜೇತ ತಂಡಗಳಲ್ಲಿ ಕ್ರಮವಾಗಿ ಮೊದಲ, ಮೂರನೆಯ ಹಾಗೂ ಐದನೆಯ ವಿಜೇತ ತಂಡವಾಗಿ ಒಟ್ಟು ರೂ. 30,000 ಬಹುಮಾನ ಪಡೆದು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್ ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ನಾಗರಾಜ ರಾವ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಜಯ್ ರಾವ್ ಮತ್ತು ಧನುಷ್ ಶಾಸ್ತ್ರಿ ಇವರು ಹಿರಿಯಡ್ಕದ ಕೆಪಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಾದ ನಾಗರಾಜ್ ಮತ್ತು ಆಯುಷ್ ಶೆಟ್ಟಿ ಇವರೊಂದಿಗೆ ಅಭಿವೃದ್ಧಿ ಪಡಿಸಿದ “ಎ ಪ್ರಿಸಿಶನ್ ಕ್ರಾಪ್ ಪಲ್ಸ್-ಅಗ್ರಿಟೆಕ್” ಎಂಬ ಪ್ರಾಜೆಕ್ಟಿಗೆ 1ನೇ ಸ್ಥಾನ, ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜಿ ಎಸ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪೂಜಾ ವಿ ಮತ್ತು ವಿಕ್ರಮ್ ಪೂಜಾರಿ ಇನ್ನಂಜೆಯ ಎಸ್ ವಿ ಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಾದ ಮನ್ವಿತ್ ಮತ್ತು ಹರೀಶ್ ಇವರೊಂದಿಗೆ ಅಭಿವೃದ್ಧಿ ಪಡಿಸಿದ “ಎಪಿನೆಕ್ಟ್” ಪ್ರಾಜೆಕ್ಟಿಗೆ 3ನೇ ಸ್ಥಾನ, ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸದಾನಂದ ಎಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ನಿಶಿತಾ ಬಿ ರಾವ್ ಮತ್ತು ಪಂಚಮಿ ಹೆಬ್ಬಾರ್ ಇವರು ಒಳಕಾಡು ಜಿ ಎಚ್ ಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಾದ ವಿಶ್ವ ಮತ್ತು ಆಶ್ಲೇಷ್ ಇವರೊಂದಿಗೆ ಅಭಿವೃದ್ಧಿ ಪಡಿಸಿದ “ಟ್ರ್ಯಾಶ್ ಟ್ರ್ಯಾಕರ್” ಪ್ರಾಜೆಕ್ಟಿಗೆ 5ನೇ ಸ್ಥಾನ ದೊರೆತಿದೆ.
ಇದರ ಜೊತೆಗೆ ಬಂಟಕಲ್ ವಿದ್ಯಾಸಂಸ್ಥೆಯ ಭೂಷಣ್ ಪೂಜಾರಿ ಮತ್ತು ಕೆ ಅನುಷಾ ವಿ ಪ್ರಭು ಕಾರ್ಕಳದ ಭುವನೇಂದ್ರ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸಿದ್ದರಾಜು ಮತ್ತು ಶ್ರೀವರ ಅವರೊಂದಿಗೆ ಅಭಿವೃದ್ಧಿ ಪಡಿಸಿದ ಪ್ರಾಜೆಕ್ಟಿಗೆ ಸಮಾಧಾನಕರ ಬಹುಮಾನ ದೊರೆತಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.