ಮುಲ್ಕಿ: ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಜ. 17ರಂದು ನಡೆಯಲಿರುವ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶಕ್ಕೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು 14 ಪಂಚಾಯತ್ ಹಾಗೂ ಎರಡು ಪಟ್ಟಣ ಪಂಚಾಯತ್ ಹಾಗೂ ಒಂದು ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಸದಸ್ಯರನ್ನು, ಪ್ರತಿಯೊಬ್ಬ ಕಾರ್ಯಕರ್ತರನ್ನು ಭಾಗವಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಸಮಾವೇಶ ನಡೆಯುತ್ತಿದ್ದು ಮುಖ್ಯಮಂತ್ರಿ ಸಹಿತ ಅನೇಕ ನಾಯಕರು ಭಾಗವಹಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಯೋಜನೆಯಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದು ಕಾರ್ಯಕರ್ತರಿಗೆ ಮತ್ತಷ್ಟು ಬಲ ಬಂದಿದೆ ಎಂದು ಅವರು ಹೇಳಿದರು.
ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ನೋಂದಾವಣೆ ಮಾಡಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಲ್ಲುತ್ತದೆ. ಬಿಜೆಪಿಯವರು ಬಾಯಲ್ಲಿ ಧರ್ಮದ ಪ್ರಚಾರ ಮಾಡುತ್ತಿದ್ದರೆ ನಾವು ಗ್ಯಾರಂಟಿ ಯೋಜನೆ ಮೂಲಕ ಗೆಲುವು ಸಾಧಿಸಿದ್ದೇವೆ. ಹಸಿವು ಮುಕ್ತ ಕರ್ನಾಟಕ ಯೋಜನೆ ಯಶಸ್ವಿಯಾಗಿದೆ. ಸಮಾವೇಶಕ್ಕೆ ಕ್ಷೇತ್ರದಿಂದ 55 ಬಸ್ಸುಗಳ ವ್ಯವಸ್ಥೆಯಾಗಿದ್ದು ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್ ಎಚ್ ವಸಂತ್ ಬರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾಂಗ್ರೆಸ್ ನಾಯಕರಾದ ಅಬ್ದುಲ್ ಖಾದರ್, ಬಾಲಚಂದ್ರ ಕಾಮತ್, ಧರ್ಮಾನಂದ ಶೆಟ್ಟಿಗಾರ್ಮತ್ತಿತರರು ಉಪಸ್ಥಿತರಿದ್ದರು.