ಹಿರಿಯಡ್ಕ: ಇಲ್ಲಿನ ಪೆರ್ಣಂಕಿಲ ಗ್ರಾಮದಲ್ಲಿ ಸಮಗ್ರ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಿದ್ಧವಾಗುತ್ತಿರುವ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ – ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ದೇವಾಲಯಗಳಿಗೆ ಉಳ್ಳವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದವರೇ ಶಕ್ತಿಮೀರಿ ದೇಣಿಗೆ ಸಮರ್ಪಿಸುತ್ತಿದ್ದಾರೆ. ಇದಕ್ಕೆ ಅವರು ಕ್ಷೇತ್ರ ಸಾನಿಧ್ಯದಲ್ಲಿಟ್ಟಿರುವ ಭಕ್ತಿಯೇ ಕಾರಣ. ಧಾರ್ಮಿಕ ಕ್ಷೇತ್ರಗಳಿಗೆ ನೀಡುವ ಕಿಂಚಿತ್ ದೇಣಿಗೆಯೂ ಸದ್ಬಳಕೆಯಾಗುತ್ತದೆ. ಅದು ಧರ್ಮರಕ್ಷಣೆ, ಲೋಕೋಪಕಾರದ ಜೊತೆಗೆ ವೈಯುಕ್ತಿಕ ಪುಣ್ಯಸಂಚಯಕ್ಕೂ ಕಾರಣವಾಗುತ್ತದೆ. ಈ ಗ್ರಾಮೀಣ ಪರಿಸರದಲ್ಲಿ ಬಹುಸುಂದರ ಕಾಷ್ಟಶಿಲ್ಪಗಳೊಂದಿಗೆ ದೇಗುಲ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಅವರು, ತೀರಾ ಗ್ರಾಮೀಣ ಭಾಗವಾಗಿರುವ ಪೆರ್ಣಂಕಿಲದಲ್ಲಿ 20 ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ ಎಂದರೇ ಅದಕ್ಕೆ ಈ ಕ್ಷೇತ್ರದ ಮಹಾತ್ಮೆಯೇ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಮಾ.17ರಿಂದ ಏ.2ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪ್ರಚಾರಕ್ಕಾಗಿ ವಾಹನ ಸ್ಟಿಕ್ಕರ್ಸ್ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಪೇಜಾವರ ಮಠದ ದಿವಾನ ಸುಬ್ರಹ್ಮಣ್ಯ ಭಟ್, ದೇವಳದ ತಂತ್ರಿಗಳಾದ ಮಧುಸೂದನ ತಂತ್ರಿ ಮತ್ತು ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್ ವಂದಿಸಿದರು. ಕಾರ್ಯದರ್ಶಿ ಉಮೇಶ್ ನಾಯಕ್ ಪೆರ್ಣಂಕಿಲ ಕಾರ್ಯಕ್ರಮ ನಿರೂಪಿಸಿದರು.