ನವದೆಹಲಿ: ಭಾರತವು ತಕ್ಷಣವೇ ಜಾರಿಗೆ ಬರುವಂತೆ ಮ್ಯಾನ್ಮಾರ್ ಗಡಿಯಲ್ಲಿ ಮುಕ್ತ ಚಲನೆಯ ಆಡಳಿತವನ್ನು ಅಮಾನತುಗೊಳಿಸಿದೆ. ಇದರರ್ಥ ಇನ್ನು ಮುಂದೆ ಗಡಿ ಪ್ರದೇಶಗಳಲ್ಲಿ ವಾಸಿಸುವ ಭಾರತಕ್ಕೆ ಬರಲಿಚ್ಛಿಸುವ ಜನರಿಗೆ ವೀಸಾ ಅಗತ್ಯವಿರುತ್ತದೆ.
ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ರಚನೆಯನ್ನು ಕಾಪಾಡಿಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಚಲನೆಯ ಆಡಳಿತವನ್ನು (FMR) ರದ್ದುಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ.
ಅದಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ವ್ಯವಸ್ಥೆಯನ್ನು ರದ್ದು ಮಾಡುವ ಪ್ರಕ್ರಿಯೆಯಲ್ಲಿರುವುದರಿಂದ, ಗೃಹ ಸಚಿವಾಲಯವು ತಕ್ಷಣವೇ ಜಾರಿಗೆ ಬರುವಂತೆ ಮುಕ್ತ ಚಲನೆಯನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮುಕ್ತ ಚಲನೆಯನ್ನು ಅನ್ನು ರದ್ದುಗೊಳಿಸುವಂತೆ ಮತ್ತು ಅದರ ಬೇಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವನ್ನು ಒತ್ತಾಯಿಸಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಗಡಿಯಾಚೆಗಿನ ಜನರ ಮುಕ್ತ ಸಂಚಾರವೇ ಕಾರಣ ಎಂದು ಅವರು ಹೇಳಿದ್ದರು.
ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಚಲನೆಯ ಆಡಳಿತವು 1970 ರ ದಶಕದ ಹಿಂದಿನದಾಗಿದ್ದು ಇದರ ಅಡಿಯಲ್ಲಿ ಭಾರತದ ಪ್ರಜೆ ಅಥವಾ ಮ್ಯಾನ್ಮಾರ್ನ ಪ್ರಜೆ ಮತ್ತು ಗಡಿಯ ಎರಡೂ ಬದಿಯಲ್ಲಿ 16 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಗುಡ್ಡಗಾಡು ಬುಡಕಟ್ಟು ಜನಾಂಗದ ಸದಸ್ಯರು ಬಾರ್ಡರ್ ಪಾಸ್ನ ಮೂಲಕ ಗಡಿಯನ್ನು ದಾಟಬಹುದಿತ್ತು. ಇದು ಸಾಮಾನ್ಯವಾಗಿ ಒಂದು ವರ್ಷ ಮಾನ್ಯವಾಗಿರುತ್ತದೆ ಮತ್ತು ಪ್ರತಿ ಭೇಟಿಗೆ ಎರಡು ವಾರಗಳವರೆಗೆ ಉಳಿಯಬಹುದಾಗಿತ್ತು.
ಇದೀಗ ಮುಕ್ತ ಚಲನೆ ಆಡಳಿತಕ್ಕೆ ಇತಿಶ್ರೀ ಹಾಡಲಾಗಿದ್ದು 1,643-ಕಿಲೋಮೀಟರ್ ಗಡಿ ಪ್ರದೇಶಕ್ಕೆ ಬೇಲಿ ಹಾಕಲಾಗುವುದು.