ಉಡುಪಿ: ನಕ್ಸಲ್ ತಂಡದ ನಾಯಕ ವಿಕ್ರಮ್ ಗೌಡ ಹಾಗೂ ಆತನ ಸಹಚರರರು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಓಡಾಟ ನಡೆಸಿದ್ದಾರೆ ಎಂಬ ಮಾಹಿತಿಯ ಮೇರೆಗೆ ಈ ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಐದು ದಿನಗಳ ಕಾಲ ಹೈ ಅಲರ್ಟ್ ಘೋಷಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಎಎನ್ಎಫ್ಗೆ ಸೂಚನೆ ನೀಡಲಾಗಿದೆ.
ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿನ ಬಳಿಕ ವಿಕ್ರಮ್ ಗೌಡ ತಲೆಮರೆಸಿಕೊಂಡಿದ್ದು, ಈಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಿಕ್ರಮ್ ಗೌಡ ಓಡಾಟದ ಸುಳಿವು ಸಿಕ್ಕಿದೆ. ಈ ಭಾಗದಲ್ಲಿ ನಕ್ಸಲರ ಓಡಾಟದ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಎನ್ಎಫ್ನಿಂದ ಕೂಂಬಿಂಗ್ ಆರಂಭಗೊಂಡಿದೆ. ಅಲ್ಲದೇ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ನಕ್ಸಲ್ ನಿಗ್ರಹ ದಳಕ್ಕೆ ಸೂಚನೆ ನೀಡಲಾಗಿದೆ.
ಕಳೆದ ಒಂದು ತಿಂಗಳಿನ ಹಿಂದೆ ಕೇರಳದ ಥಂಡರ್ಕೂಲ್ನಲ್ಲಿ ನಕ್ಸಲರು-ಪೊಲೀಸರ ಮಧ್ಯೆ ಫೈರಿಂಗ್ ನಡೆದಿತ್ತು. ಈ ವೇಳೆ ನಕ್ಸಲರು ಕರ್ನಾಟಕದ ಒಳಗೆ ಪ್ರವೇಶಿಸಿರುವ ಬಗ್ಗೆ ವರದಿಯಾಗಿತ್ತು.
ಸಾಕೇತ್ ರಾಜನ್ ರೆಡ್ ಸಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ನಡೆಸಿದ್ದರು ಎನ್ನಲಾಗಿದೆ. 19 ವರ್ಷದ ಹಿಂದೆ ಎನ್ಕೌಂಟರ್ ನಲ್ಲಿ ಸಾಕೇತ್ ರಾಜನ್ ಸಾವನ್ನಪ್ಪಿದ್ದ. 2005ರ ಫೆ.5ರ ಬೆಳಗಿನ ಜಾವ ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಸಮೀಪ ಎನ್ಕೌಂಟರ್ ನಡೆದಿತ್ತು.