ಹೃದಯವೆಂಬ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ನಡೆದರೆ ಎಲ್ಲರಿಗೂ ಒಳಿತು: ಭೀಮನಕಟ್ಟೆ ರಘುವರೇಂದ್ರತೀರ್ಥ ಸ್ವಾಮೀಜಿ

ದೊಡ್ಡಣ್ಣಗುಡ್ಡೆ: ಅಯೋಧ್ಯೆಯಲ್ಲಿ 5 ಶತಮಾನಗಳ ಅನಂತರ ಪುನಃ ಶ್ರೀರಾಮನಿಗೆ ಗುಡಿ ನಿರ್ಮಾಣಗೊಂಡು ಸಕಲ ಭಕ್ತರಿಗೆ ಹಬ್ಬದ ದಿನವಾಗಿದೆ. ಮನುಷ್ಯನಾಗಿ ಹೇಗೆ ಬಾಳಬೇಕೆಂದು ಪ್ರಪಂಚ ಮುಖಕ್ಕೆ ತೋರಿಸಿಕೊಡಲು ಧರೆಗಿಳಿದ ದೊಡ್ಡ ಅವತಾರವೇ ರಾಮಾವತಾರ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾದಂತೆ ನಮ್ಮ ಹೃದಯವೆಂಬ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡಿಕೊಂಡರೆ ಎಲ್ಲವೂ ಒಳಿತಾಗುವುದು. ಶ್ರೀರಾಮನನ್ನು ಧ್ಯಾನಿಸುವಾಗ ಆತನ ಒಂದು ಗುಣ ಸ್ವಭಾವವನ್ನಾದರೂ ನಮ್ಮೊಳಗೆ ತುಂಬಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಶ್ರೀ ಮದಚ್ಚುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನ ಭೀಮನಕಟ್ಟೆ ಮಠಾಧಿಪತಿ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಹೇಳಿದರು.

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಯೋಧ್ಯಾ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ ಪ್ರಯುಕ್ತ ಕ್ಷೇತ್ರದಲ್ಲಿ ನಡೆದ ರಾಮನಾಮ ತಾರಕ ಮಂತ್ರ ಹೋಮದ ಸಭಾ ಕಾರ್ಯಕ್ರಮದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇನ್ನೊಬ್ಬರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಮಂದಸ್ಮಿತದಿಂದ ಸತ್ಯವಾದ ಮಾತುಗಳನ್ನು ಮೃದುವಾಗಿ ಆಡುವುದರ ಮೂಲಕ ಪರಮಾತ್ಮ ಶ್ರೀರಾಮಚಂದ್ರನು ಸ್ಮಿತಪೂರ್ವಭಾಷಿ ಎಂಡು ಹೆಸರುವಾಸಿಯಾಗಿದ್ದಾನೆ. ಅಂತಹ ಒಂದು ಸದ್ಗುಣವನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮಿಂದಾಗಬೇಕು ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆ ಕಾಲದಲ್ಲಿ ದೇಶದೆಲ್ಲೆಡೆ ಭಕ್ತರಿಂದ ಸಂಭ್ರಮಾಚರಣೆ ನಡೆಯುತ್ತಿದೆ. ನಾವೆಲ್ಲರೂ ಶ್ರೀರಾಮನ ಆದರ್ಶವನ್ನು ಪಾಲಿಸಿಕೊಂಡು ಬದುಕುವ ಯೋಗ-ಯೋಗ್ಯತೆಯನ್ನು ಅವನೇ ಕರುಣಿಸಬೇಕೆಂದು ಪ್ರಾರ್ಥನೆ ಎಂದರು.

ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಿ, ಕ್ಷೇತ್ರದಲ್ಲಿ ನೆರವೇರಿಸಲಾದ ರಾಮತಾರಕ ಮಂತ್ರ ಹೋಮವನ್ನು ಪ್ರಧಾನಿ ನರೇಂದ್ರ ಮೋದಿಯವರನ್ನೇ ಸಂಕಲ್ಪವಾಗಿರಿಸಿ, ದೇಶದ ಸುಭಿಕ್ಷೆಗೆ ಪ್ರಾಾರ್ಥಿಸಲಾಗಿದೆ ಎಂದರು.

ರಂಜನಿ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಅರವಿಂದ ಹೆಬ್ಬಾರ್, ಪಲಿಮಾರು ಮಠದ ಪಿಆರ್‌ಒ ಶ್ರೀಶ ಭಟ್ ಕಡೆಕಾರು ಉಪಸ್ಥಿತರಿದ್ದರು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ನಿರೂಪಿಸಿ, ವಂದಿಸಿದರು.