ಐ.ಎ.ಎಸ್ ವರ್ಸಸ್ ಐ.ಪಿ.ಎಸ್: ರೂಪಾ ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದ ರೋಹಿಣಿ; ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿಕೆ

ನವದೆಹಲಿ: ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರದಂದು ನಡೆಸಿತು.

ಡಿ. ರೂಪಾ ಅವರು ಕ್ಷಮೆ ಕೇಳಲೇಬೇಕು ಎಂದು ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲ ಅವಹೇಳನಕಾರಿ ಪೋಸ್ಟ್‌ಗಳನ್ನು ತೆಗೆದು ಹಾಕಬೇಕು. ಇದರಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ ಎಂದು ಡಿ. ರೂಪಾ ಅವರು ಕ್ಷಮೆಯಾಚಿಸಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿದ್ದಾರೆ.

ರೋಹಿಣಿ ಅವರ ವಾದವನ್ನು ತಿರಸ್ಕರಿಸಿದ ಡಿ. ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ರೂಪಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಡಿ. ರೂಪಾ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆಂದು ವಾದಿಸಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಪರ ವಕೀಲರು, ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆಂದು ಹೇಳಿದ್ದೇನೆ ಹೊರತು ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಈ ಹಂತದಲ್ಲಿ ಮಧ್ಯ ಪ್ರವೇಶಿದ ನ್ಯಾಯಮೂರ್ತಿ ಎ ಎಸ್ ಓಕಾ , ಇಬ್ಬರು ಅಧಿಕಾರಿಗಳೂ ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕಾಗಿ ಒಂದು ತಿಂಗಳ ಸಮಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಿಂದ ಎಲ್ಲ ಪೋಸ್ಟ್ ಗಳನ್ನು ತೆಗೆದುಹಾಕಬೇಕು. ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದಾದರೂ ಹೇಗೆ ಎಂದ ಸಿಂಧೂರಿ ಪರ ವಕೀಲರು ಹೇಳಿದಾಗ ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣ ಇತ್ಯರ್ಥಕ್ಕೆ ಯೋಚಿಸಿದ್ದೇವೆ. ಆದರೆ ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ ನ್ಯಾಯಮೂರ್ತಿ ತಿಳಿಸಿದ್ದಾರೆ.

ನಮಗೆ ಉಜ್ವಲ ಭವಿಷ್ಯವಿರಬಹುದು. ಆದರೆ ಈಗ ಜನರು ನನ್ನನ್ನು ನೋಡುವ ರೀತಿಯೇ ಬೇರೆ ಆಗಿದೆ. ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದು ರೋಹಿಣಿ ವಕೀಲರು ಪ್ರತಿಕ್ರಿಯಿಸಿದ್ದಾರೆ. ಮೌನವಾಗಿರಲು ಅಥವಾ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳು ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದ್ದಾರೆ.