ಸ್ಟಾರ್ಟ್ ಅಪ್ ಕಂಪನಿ ಸಂಸ್ಥಾಪಕಿಯ ಮಗು ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆ ಸಂಪೂರ್ಣ; ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ?

ಬೆಂಗಳೂರು: ಇಲ್ಲಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ ಅವರ ನಾಲ್ಕು ವರ್ಷದ ಮಗ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಕುಮಾರ್ ನಾಯ್ಕ್ ತಿಳಿಸಿದ್ದಾರೆ.

ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಒಂದೋ ಬಟ್ಟೆ ಅಥವಾ ದಿಂಬು ಬಳಸಲಾಗಿದೆ. ಕತ್ತು ಹಿಸುಕಿದ ಕಾರಣ ಮಗು ಸಾವನ್ನಪ್ಪಿದೆ. ಕೈಗಳನ್ನು ಬಳಸಿ ಕತ್ತು ಹಿಸುಕಿದಂತೆ ಕಾಣುತ್ತಿಲ್ಲ. ದಿಂಬು ಅಥವಾ ಇನ್ನಾವುದೋ ವಸ್ತುಗಳನ್ನು ಬಳಸಿದಂತೆ ತೋರುತ್ತಿದೆ. ಮಗುವಿನಲ್ಲಿನ ರಿಗರ್ ಮೋರ್ಟಿಸ್ ಪರಿಹಾರವಾಗಿದೆ ಎಂದು ಚಿತ್ರದುರ್ಗದ ಹಿರಿಯೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕುಮಾರ್ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದರು.

“ಸಾಮಾನ್ಯವಾಗಿ ಭಾರತದಲ್ಲಿ, 36 ಗಂಟೆಗಳ ನಂತರ ರಿಗಾರ್ ಮೋರ್ಟಿಸ್ ಪರಿಹರಿಸುತ್ತದೆ ಆದರೆ ಈ ಮಗುವಿನ ಪ್ರಕರಣದಲ್ಲಿ, ಯಾವುದೇ ಕಠಿಣ ಮೋರ್ಟಿಸ್ ಇರಲಿಲ್ಲ ( ರಾಸಾಯನಿಕ ಬದಲಾವಣೆಗಳಿಂದ ದೇಹದ ಸ್ನಾಯುಗಳು ಗಟ್ಟಿಯಾಗುವುದು) ಆದ್ದರಿಂದ, ಮರಣ ಸಂಭವಿಸಿ 36 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಮಗುವಿನ ದೇಹದಲ್ಲಿ ಯಾವುದೇ ರಕ್ತದ ನಷ್ಟ ಅಥವಾ ಹೋರಾಟದ ಗುರುತುಗಳಿಲ್ಲ” ಎಂದು ನಾಯಕ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ಯಾವುದೇ ಕೊಲೆಯ ಆಯುಧ ಇರಲಿಲ್ಲ. ಸುಚನಾ ಒಂದು ಜೊತೆ ಕತ್ತರಿ ಬಳಸಿ ತನ್ನ ಮಣಿಕಟ್ಟುಗಳನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಇದನ್ನು ಪರಿಶೀಲಿಸಲು ಡಿಎನ್‌ಎ ಪರೀಕ್ಷೆಯನ್ನು ಮಾಡಲಾಗುವುದು” ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಥ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಸುಚನಾ ಸೇಠ್ ಅವರ ವಿಚ್ಛೇದಿತ ಪತಿ ವೆಂಕಟ್ ರಾಮನ್ ಅವರು ಮಂಗಳವಾರ ಸಂಜೆ ಜಕಾರ್ತದಿಂದ ಭಾರತಕ್ಕೆ ಮರಳಿದ್ದು, ತಮ್ಮ ಮಗುವಿನ ಸಾವಿನ ಬಗ್ಗೆ ತಿಳಿದುಕೊಂಡಿದ್ದಾರೆ.ಸುಚನಾ ಸೇಠ್ ಅವರ ವಿಚ್ಛೇದಿತ ಪತಿ ವೆಂಕಟ್ ರಾಮನ್ ಅವರು ಮಂಗಳವಾರ ಸಂಜೆ ಜಕಾರ್ತದಿಂದ ಭಾರತಕ್ಕೆ ಮರಳಿದ್ದು, ತಮ್ಮ ಮಗುವಿನ ಸಾವಿನ ಬಗ್ಗೆ ತಿಳಿದುಕೊಂಡಿದ್ದಾರೆ. ವೆಂಕಟ್ ರಾಮನ್ ಅವರು ಕರ್ನಾಟಕದ ಚಿತ್ರದುರ್ಗಕ್ಕೆ ಆಗಮಿಸಿದ್ದು, ತಮ್ಮ ಮಗನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಸ್ಥಳೀಯ ಅಧಿಕಾರಿಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ರಜೆಯ ವೇಳೆ ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಮಗನನ್ನು ಕೊಂದ ಆರೋಪದ ಮೇಲೆ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಅವರನ್ನು ಸೋಮವಾರ ರಾತ್ರಿ ಕರ್ನಾಟಕದ ಚಿತ್ರದುರ್ಗದಿಂದ ಬಂಧಿಸಲಾಗಿದೆ.

ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಬಾಲಕನ ಶವವನ್ನು 39 ವರ್ಷದ ಸುಚನಾ ಸೇಠ್ ಹೊತ್ತುಕೊಂಡು ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಗೋವಾ ಪೊಲೀಸರ ನಿರ್ದೇಶನದ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ.