ಪಣಜಿ: ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಸಂಸ್ಥಾಪಕಿಯಾಗಿರುವ 39 ವರ್ಷದ ಮಹಿಳೆಯೊಬ್ಬಳು ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದು ಮಗನ ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣಿಸಿರುವ ಘಟನೆ ವರದಿಯಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ ಮೈಂಡ್ಫುಲ್ ಎಐ ಲ್ಯಾಬ್ನ ಸಹ ಸಂಸ್ಥಾಪಕಿ ಸುಚನಾ ಸೇಠ್ ಅವರನ್ನು ಸೋಮವಾರದಂದು ಕರ್ನಾಟಕದ ಚಿತ್ರದುರ್ಗದಲ್ಲಿ ಆಕೆಯ ಮಗನ ಶವದ ಚೀಲದ ಜೊತೆ ಬಂಧಿಸಲಾಗಿದೆ.
ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ವರದಿ ಹೇಳಿದೆ. ಆದರೆ ಕೊಲೆಯ ಉದ್ದೇಶ ಇನ್ನೂ ತಿಳಿದಿಲ್ಲ.
ಸೇಠ್ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಚೆಕ್ ಇನ್ ಮಾಡಿದ್ದಾಳೆ. ಸೋಮವಾರ, ಆಕೆ ಕೊಠಡಿಯಿಂದ ಒಬ್ಬಂಟಿಯಾಗಿ ಚೆಕ್ ಔಟ್ ಮಾಡಿದ್ದಾಳೆ ಹಾಗೂ ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದ್ದಾಳೆ. ವಿಮಾನದಲ್ಲಿ ತೆರಳಲು ಸಲಹೆ ನೀಡಿದರೂ ಟ್ಯಾಕ್ಸಿ ತರಿಸುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಮಗ ಕಾಣೆಯಾಗಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಆಕೆ ಕೋಣೆ ತೆರವುಗೊಳಿಸಿದ ಬಳಿಕ ರೂಮ್ ಸರ್ವಿಸ್ ಸಿಬ್ಬಂದಿ ಕೂಡ ಆಕೆಯ ಅಪಾರ್ಟ್ಮೆಂಟ್ನಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದಾರೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಸೇಠ್ ಜೊತೆ ಮಾತನಾಡಿ ಆಕೆಯ ಮಗನ ಬಗ್ಗೆ ಕೇಳಿದಾಗ ತನ್ನ ಸ್ನೇಹಿತರ ಮನೆಯಲ್ಲಿ ಇದ್ದಾನೆ ಎಂದು ವಿಳಾಸ ನೀಡಿ ಜಾರಿಕೊಂಡಿದ್ದಾಳೆ. ವಿಳಾಸ ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಕೂಡಲೇ ಪೊಲೀಸರು ಕಾರು ಚಾಲಕನಿಗೆ ಕರೆ ಮಾಡಿ ಕೊಂಕಣಿ ಭಾಷೆಯಲ್ಲಿ ಮಾತನಾಡಿ ಕಾರನ್ನು ಚಿತ್ರದುರ್ಗದ ಹತ್ತಿರದ ಠಾಣೆಯತ್ತ ಚಲಾಯಿಸಲು ಹೇಳಿದ್ದಾರೆ. ಪೊಲೀಸರು ಸುಚನಾ ಸೇಠ್ ನನ್ನು ಠಾಣೆಯಲ್ಲಿ ಬಂಧಿಸಿದ್ದಾರೆ ಮತ್ತು ಆಕೆ ಪ್ರಯಾಣಿಸುತ್ತಿದ್ದ ಬ್ಯಾಗ್ನಲ್ಲಿ ಆಕೆಯ ಮಗನ ಶವವನ್ನು ಪತ್ತೆಹಚ್ಚಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದೆ.