ಬೆಂಗಳೂರು: ರಾಜ್ಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆಯನ್ನು’ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಶುಕ್ರವಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಇತ್ತೀಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಗ್ರೀವಾಜ್ಞೆ ಮೂಲಕ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿ ಮಾಡುವುದಾಗಿ ತಿಳಿಸಿದ್ದರು.
ಅಲ್ಲದೆ, ಸುಗ್ರೀವಾಜ್ಞೆ ಮೂಲಕ ಜಾರಿಯಾಗಲಿರುವ ತಿದ್ದುಪಡಿ ಕಾನೂನಿನನ್ವಯ 2024ರ ಫೆಬ್ರವರಿ 28ರ ಒಳಗಾಗಿ ರಾಜ್ಯದಲ್ಲಿನ ಎಲ್ಲಾ ‘ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನರಂಜನಾ ಕೇಂದ್ರ ಮತ್ತು ಹೋಟೆಲ್’ ಮುಂತಾದವುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು. ಉಳಿದ ಶೇ.40ರಷ್ಟು ಜಾಗದಲ್ಲಿ ಮಾತ್ರ ಇತರೆ ಭಾಷೆ ಇರಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಇದರಂತೆ ಶುಕ್ರವಾರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಯಿದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ನಿರ್ಧರಿಸಲಾಗಿದೆ. ನಿರ್ಧಾರಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದ ತಕ್ಷಣದಿಂದ ತಿದ್ದುಪಡಿ ನಿಯಮ ಜಾರಿಯಾಗಲಿದೆ.