ಕರಾವಳಿ-ಮಲೆನಾಡಿನಲ್ಲಿ ಅಕಾಲಿಕ ಮಳೆ: ಕಾಫಿ, ಅಡಿಕೆ ಬೆಳೆಗಾರರಲ್ಲಿ ಆತಂಕ

ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ. ಮಳೆ ನಿರೀಕ್ಷಿಸದ ರೈತರು ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ. ಅದರಲ್ಲೂ ಇದು ಕಾಫಿ ಬೆಳೆಯ ಸಮಯವಾಗಿದ್ದು, ಕಟಾವು ಮಾಡಿರುವ ಕಾಫಿ ಬೆಳೆ ಕೂಡ ಮಳೆಗೆ ಹಾನಿಯಾಗುವ ಭೀತಿ ಎದುರಾಗಿದೆ.

ಕೊಡಗಿನ ನಾಪೋಕ್ಲು ಹಾಗೂ ಮಡಿಕೇರಿ ಭಾಗದಲ್ಲಿ ನಿರಂತರ ಮಳೆ ಬೀಳುತ್ತಿದ್ದು, ಕಾಫಿ ಹಣ್ಣುಗಳು ಹಾಳಾಗುವ ಸಾಧ್ಯತೆ ಇದೆ ಎಂದು ಬೆಳೆಗಾರರು ಗಾಬರಿಯಾಗಿದ್ದಾರೆ.

ಚಿಕ್ಕಮಗಳೂರು,ಕೊಡಗು ಹಾಗೂ ಮಡಿಕೇರಿಯ ಕೆಲವು ಭಾಗಗಳಲ್ಲಿ ಕಾಫಿ ಕೊಯ್ಲು ಮಾಡಿ ಒಣಗಲು ಹಾಕಲಾಗಿದ್ದು ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಬೆಳೆ ನಾಶವಾಗುವ ಭೀತಿ ಎದುರಾಗಿದೆ.

ಈ ವರ್ಷ ಕಾಫಿ ಬೆಳೆಗೆ ದರ ಹೆಚ್ಚಿದ್ದು, ಪ್ರತಿಚೀಲಕ್ಕೆ 7000ಕ್ಕೂ ಅಧಿಕ ದರವಿದೆ. ಆದರೆ ಈಗ ಸುರಿಯುತ್ತಿರುವ ಮಳೆಯು ಬೆಳೆಗಾರರ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಮಾಡಿದೆ.

ಇತ್ತ ಒಣಗಲು ಹಾಕಿರುವ ಅಡಿಕೆ ಕೂಡಾ ಮಳೆಗೆ ಒದ್ದೆಯಾಗುವ ಆತಂಕ ಎದುರಾಗಿದ್ದು ಅಡಿಕೆ ಬೆಳೆಗಾರರಲ್ಲೂ ಚಿಂತೆ ಮನೆ ಮಾಡಿದೆ.