ಉಡುಪಿ: ವಿಶ್ವಪ್ರಸಿದ್ಧ ಉಡುಪಿ ಪುತ್ತಿಗೆ ಮಠದ ಪರ್ಯಾಯೋತ್ಸವ ಜ.17 ಮತ್ತು 18ರಂದು ನಡೆಯಲಿದ್ದು ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ.
ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಕೃಷ್ಣಪೂಜೆಯನ್ನು ಕೈಗೊಳ್ಳಲು ಅಣಿಯಾಗಿದ್ದಾರೆ. ದೇಶ ವಿದೇಶದಲ್ಲಿ ಸನಾತನ ಹಿಂದೂ ಧರ್ಮವನ್ನು ಪ್ರಚುರಪಡಿಸಿ ಅಮೆರಿಕಾ, ಇಂಗ್ಲಂಡ್ ಮಾತ್ರವಲ್ಲದೇ ಇತರ ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ಮಂದಿರ, ಮಠಗಳನ್ನು ಸ್ಥಾಪಿಸಿರುವ ಪುತ್ತಿಗೆ ಶ್ರೀಪಾದರು ನಾಲ್ಕನೇ ಬಾರಿಗೆ ಪರ್ಯಾಯ ಪೀಠವನ್ನೇರಲಿದ್ದಾರೆ.
ಪುತ್ತಿಗೆ ಪರ್ಯಾಯಕ್ಕೆ ಈಗಾಗಲೇ ಉಡುಪಿಯಲ್ಲಿ ಭರದ ತಯಾರಿಗಳು ನಡೆದಿದದ್ದು ಅಂತಿಮ ಹಂತದಲ್ಲಿವೆ. ಈ ಬಾರಿ ಪುತ್ತಿಗೆ ಶ್ರೀಪಾದರು ತಮ್ಮ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದು ಘೋಷಿಸಿದ್ದು, ಭಗವದ್ಗೀತೆಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕೋಟಿ ಗೀತಾಲೇಖನಯಜ್ಞದಂತಹ ವಿಶೇಷ ಯೋಜನೆಗಳನ್ನು ರೂಪಿಸಿದ್ದಾರೆ. ಈ ಬಾರಿ ನಗರಾಲಂಕಾರಕ್ಕೆ ವಿಶೇಷ ಒತ್ತನ್ನು ಪರ್ಯಾಯ ಸ್ವಾಗತ ಸಮಿತಿ ನೀಡಿದ್ದು ಪರ್ಯಾಯದ ದಿನ ದಂಡತೀರ್ಥದಿಂದ ಉಡುಪಿಗೆ ಆಗಮಿಸುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ, ನಗರದ ಎಲ್ಲಾ ರಸ್ತೆಗಳಿಗೆ ವಿದ್ಯುತ್ ದೀಪಗಳ ಅಲಂಕಾರ ನಡೆಯುತ್ತಿದೆ.
ಈ ಬಾರಿಯ ವಿಶ್ವಗೀತಾ ಪರ್ಯಾಯಕ್ಕೆ ದೇಶ ವಿದೇಶದಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಬರುವ ಎಲ್ಲಾ ಅತಿಥಿಗಳಿಗೆ ಸೂಕ್ತ ಆತಿಥ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸ್ವಾಗತ ಸಮಿತಿಯ ವತಿಯಿಂದ ವಿಶಿಷ್ಟ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ಯೋಜನೆ ಯಲ್ಲಿ ಉಡುಪಿಯಿಂದ 10 ಕಿಲೋಮೀಟರ್ ಆಸುಪಾಸಿನ ಮನೆಯವರು ತಮ್ಮ ಮನೆಗಳಲ್ಲಿ ಪರ್ಯಾಯಕ್ಕೆ ಬರುವ ಅತಿಥಿಗಳಿಗೆ ಆತಿಥ್ಯ ಒದಗಿಸಲು ಇಚ್ಚಿಸಿದ್ದಲ್ಲಿ ಸ್ವಾಗತ ಸಮಿತಿಯೊಂದಿಗೆ ನೋಂದಾಯಿಸಿಕೊಂಡು ತಮಗೆ ಸೂಕ್ತ ಎನಿಸಿದ ಅತಿಥಿಗಳನ್ನು ಆರಿಸಿ ಅವರಿಗೆ ಆತಿಥ್ಯ ನೀಡವಹುದಾಗಿದೆ. ಈ ನೂತನ ಯೋಜನೆಗೆ ಈಗಾಗಲೇ ಹಲವಾರು ಮಂದಿ ನೋಂದಾಯಿಸಿಕೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪರ್ಯಾಯದ ಪೂರ್ವಭಾವಿಯಾಗಿ ಈಗಾಗಲೇ ನಗರದ ಎಲ್ಲಾ ರಸ್ತೆಗಳಿಗೆ ಡಾಮರೀಕರಣ ಕಾರ್ಯ ಅಂತಿಮ ಹಂತದಲ್ಲಿದ್ದು, ಕೆಎಂ ಮಾರ್ಗ ಸಂಪರ್ಕದ ಎಲ್ಐಸಿ ರಸ್ತೆ, ಸಂಸ್ಕೃತ ಕಾಲೇಜು, ಮಸೀದಿ ರಸ್ತೆಯ ಗುಂಡಿಗಳಿಗೆ ತೇಪೆ ಹಚ್ಚುವ ಕಾಮಗಾರಿ ನಡೆಯುತ್ತಿದೆ. ಕಿನ್ನಿಮೂಲ್ಕಿ ಸ್ವಾಗತಗೋಪುರ ಮತ್ತು ನಗರಸಭೆ ಕಚೇರಿಗೆ ಕೂಡಾ 10 ಲಕ್ಷ ರೂ ವೆಚ್ಚದಲ್ಲಿ ಬಣ್ಣ ಹಚ್ಚುವ ಕೆಲಸ ಕಾರ್ಯ ನಡೆಯುತ್ತಿದೆ. ನಗರಾಲಂಕಾರದ ಭಾಗವಾಗಿ ಸ್ವಾಗತ ಕಮಾನುಗಳ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ನಗರದಲ್ಲಿ ಒಟ್ಟು 22 ಸ್ವಾಗತಕಮಾನುಗಳು ನಿರ್ಮಾಣಗೊಳ್ಳಲಿವೆ. ಜೋಡುಕಟ್ಟೆಯಿಂದ ಡಯಾನ ವೃತ್ತದವರೆಗೆ ಸ್ವಾಗತ ಕಮಾನು ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. 40ಕ್ಕೂ ಅಧಿಕ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋದೆ ಮಠದ ಸಮೀಪ ಹಗ್ಗದ ಸ್ವಾಗತ ಕಮಾನು ಮತ್ತು ಬುಟ್ಟಿಯ ಕಮಾನು, ಕೃಷ್ಣಾಪುರ ಮಠದ ಸಮೀಪ ಬುಟ್ಟಿಯ ಕಮಾನು, ಕಾಣಿಯೂರು ಮಠದ ಬಳಿ ಪ್ರಭಾವಳಿ ಮಾದರಿ ಸ್ವಾಗತ ಕಮಾನು ರೂಪಿಸಲಾಗುತ್ತದೆ. ಬುಟ್ಟಿಯ ಕಮಾನು ಕೊರಗ ಸಮಾಜದವರಿಂದ ನಡೆಯಲಿದೆ. ಶ್ರೀ ಕೃಷ್ಣ ಮಠ, ಕನಕ ಗೋಪುರ, ಪುತ್ತಿಗೆ ಮಠಕ್ಕೆ ಈಗಾಗಲೇ ಸುಣ್ಣ ಬಣ್ಣ ಬಳಿದು ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಜನವರಿ 8 ಪುರ ಪ್ರವೇಶ; ಜನವರಿ 17-18 ಪರ್ಯಾಯ ಮಹೋತ್ಸವ:
ಜನವರಿ 8 ರಂದು ಪರ್ಯಾಯ ಶ್ರೀ ಸಗುಣೇಂದ್ರತೀರ್ಥ ಶ್ರೀಪಾದರ ಪುರಪ್ರವೇಶ ನಡೆಯಲಿದ್ದು, ಜನವರಿ 9 ರಿಂದ ಜನವರಿ 17 ರ ವರೆಗೆ ಪ್ರತಿದಿನ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಈ ಬಾರಿ ಉಡುಪಿ ಮತ್ತು ಹೊರವಲಯದ ಸುಮಾರು 243 ಗ್ರಾಮಗಳಿಂದ ಪರ್ಯಾಯದ ಅಂಗವಾಗಿ ಹಸಿರು ಹೊರೆಕಾಣಿಕೆ ಬರಲಿದ್ದು, ವಿವಿಧ ಸಂಘ ಸಂಸ್ಥೆಗಳು ಮತ್ತು ನಾಗರಿಕ ಬಾಂಧವರು ಕೂಡಾ ಬೃಹತ್ ಹೊರೆಕಾಣಿಕೆ ಸಮರ್ಪಿಸುವ ನಿಶ್ಚಯ ಮಾಡಿದ್ದಾರೆ. ಹೊರೆಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆಗಾಗಿ ಉಗ್ರಾಣ, ಊಟದ ತಯಾರಿ ಇವೆಲ್ಲವಕ್ಕೂ ಉಡುಪಿ ಸಂಪೂರ್ಣವಾಗಿ ಸನ್ನದ್ದವಾಗುತ್ತಿದೆ. ಜನವರಿ 17 ರಂದು ಪೌರ ಸನ್ಮಾನ, ಮತ್ತು ಜನವರಿ 18 ರ ಮುಂಜಾವಿನಿಂದ ಮೊದಲ್ಗೊಂಡು ಸಂಜೆಯ ವರೆಗೆ ಪರ್ಯಾಯದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ, ದರ್ಬಾರ್ ಗಳು ನಡೆಯಲಿವೆ.
ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯವು ವಿಶ್ವಕ್ಕೆ ಭಗವದ್ಗೀತೆಯ ಸಂದೇಶವನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿಶಿಷ್ಟ ಹೆಜ್ಜೆಯನ್ನು ಇಟ್ಟಿದ್ದು ವಿಶ್ವದ ಒಂದು ಕೋಟಿ ಜನರು ಭಗವದ್ ಗೀತೆಯ 700 ಶ್ಲೋಕಗಳನ್ನು ಯಾವುದೇ ಭಾಷೆಯಲ್ಲಿ ಒಂದು ಬಾರಿಯಾದರೂ ಬರೆದು ಆ ಪುಸ್ತಕವನ್ನು ಉಡುಪಿಯಲ್ಲಿ ಶ್ರೀ ಕೃಷ್ಣನಿಗೆ ಸಮರ್ಪಿಸಿ, ಕೃಷ್ಣ ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ.
1974 ರಲ್ಲಿ ಪರಮಪೂಜ್ಯ ಡಾ. ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸನ್ಯಾಸವನ್ನು ಸ್ವೀಕರಿಸಿದ್ದು ಅದರ ಸುವರ್ಣ ಮಹೋತ್ಸವವು 2024 ರಲ್ಲಿ ನಡೆಯಲಿದೆ. ಇದರ ನೆನಪಿಗಾಗಿ, ಶ್ರೀ ಸ್ವಾಮೀಜಿಯವರು ಪಾರ್ಥಸಾರಥಿ ರಥ ಎಂದೂ ಕರೆಯಲ್ಪಡುವ ಸುವರ್ಣ ಗೀತಾ ರಥವನ್ನು ಶ್ರೀ ಕೃಷ್ಣನಿಗೆ ತಮ್ಮ ಪರ್ಯಾಯದ ಅವಧಿಯಲ್ಲಿ ಅರ್ಪಿಸಲು ಪ್ರಸ್ತಾಪಿಸಿದ್ದಾರೆ.
4 ನೇ ಪರ್ಯಾಯದ ಭಾಗವಾಗಿ, ಉಡುಪಿಯ ಪವಿತ್ರ ಕ್ಷೇತ್ರ ದರ್ಶನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಗೀತಾ ಮಂದಿರವನ್ನು ನವೀಕರಿಸುವ ನಿರ್ಧಾರವನ್ನು ಕೂಡಾ ಪುತ್ತಿಗೆ ಶ್ರೀ ಪಾದರು ಕೈಗೆತ್ತಿಕೊಂಡಿದ್ದಾರೆ. ಈ ಯೋಜನೆಯನ್ನು “ಕ್ಷೇತ್ರ ವಾಸ” ಎಂದು ಕರೆಯಲಾಗಿದೆ.
ಜನವರಿ 19, 2024 ರಿಂದ ಮೊದಲಗ್ಗೊಂಡು ಜನವರಿ 16, 2026 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಗೀತಾ ಪಠಣದ ಸಂಕಲ್ಪವನ್ನು ಕೂಡಾ ಪುತ್ತಿಗೆ ಶ್ರೀ ಪಾದರು ಹೊಂದಿದ್ದಾರೆ. ವಿಶ್ವದ ಯಾವುದೇ ತಂಡಗಳು ಇದರಲ್ಲಿ ಬಾಗವಹಿಸಲು ಅವಕಾಶ ಕಲ್ಪಿಸಲಾಗಿದೆ,
ಶ್ರೀ ಮಧ್ವಾಚಾರ್ಯರು ಚಿಕ್ಕ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು ಉತ್ತರ ದ್ವಾರದಿಂದ ಉಡುಪಿಯನ್ನು ಪ್ರವೇಶಿಸಿದ್ದರು ಎಂಬ ಪ್ರತೀತಿ ಇದ್ದು, ಇದರನ್ವಯ ಮಠದ ಆವರಣದ ಉತ್ತರ ಬಾಗದಲ್ಲಿ ಮಧ್ವಾಚಾರ್ಯರು ಶ್ರೀ ಕೃಷ್ಣನ ಮೂರ್ತಿಯನ್ನು ಹಿಡಿದುಕೊಂಡು ಕೃಷ್ಣ ಮಠದ ಆವರಣಕ್ಕೆ ಬರುವಂತಹ ಸುಂದರ ಮೂರ್ತಿಯನ್ನು ಹೊಂದಿರುವ “ಮಧ್ವೇಶ ವೃತ್ತ” ದ ನಿರ್ಮಾಣದ ಸಂಕಲ್ಪ ಕೂಡಾ ಪುತ್ತಿಗೆ ಶ್ರೀ ಪಾದರಿಗಿದೆ.
ಈಗಾಗಲೇ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೇಶ ವಿದೇಶಗಳ ವಿವಿಧ ಭಾಗಗಳಿಗೆ ಸಂಚಾರ ನಡೆಸಿ ಭಕ್ತಾಧಿಗಳನ್ನು ಬೇಟಿ ಮಾಡಿ 2024 ರ ಪರ್ಯಾಯ ಮಹೋತ್ಸವಕ್ಕೆ ಪ್ರೀತಿಯ ಆಮಂತ್ರಣವನ್ನು ಕೂಡಾ ನೀಡಿದ್ದಾರೆ. ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕರನ್ನು ಕೂಡಾ ಪುತ್ತಿಗೆ ಶ್ರೀಗಳು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿರುವುದು ಈ ಬಾರಿಯ ವಿಶೇಷ.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೃಷ್ಣ ನಗರಿ ಉಡುಪಿ ನೂತನ ಪರ್ಯಾಯ ಶ್ರೀಪಾದರನ್ನು ಸ್ವಾಗತಿಸಲು ಸರ್ವ ಸನ್ನದವಾಗಿ ನಿಂತಿದೆ.