ಚೆನ್ನೈ: ಟೆಸ್ಲಾ ಮತ್ತು ಚೀನಾದ ಬಿವೈಡಿ ಕಂಪನಿಯ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ವಿನ್ಫಾಸ್ಟ್ ತನ್ನ ಮೊದಲ ಭಾರತೀಯ ಉತ್ಪಾದನಾ ಘಟಕವನ್ನು ತಮಿಳುನಾಡಿನಲ್ಲಿ ಸ್ಥಾಪಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಂಪನಿಯ ಹೊಸ ಸ್ಥಾವರವು ತೂತುಕುಡಿ ನಗರದಲ್ಲಿ ತೆರೆಯಲಿದ್ದು, ಇವಿಗಳಿಗಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿಗಳನ್ನು ಉತ್ಪಾದಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
“ಹಲವಾರು ವಿನ್ಫಾಸ್ಟ್ ಅಧಿಕಾರಿಗಳು ಸೈಟ್ಗಳನ್ನು ಪರಿಶೀಲಿಸಲು ತಮಿಳುನಾಡಿನ ತೂತುಕುಡಿ ಜಿಲ್ಲೆಗೆ ಭೇಟಿ ನೀಡಿದ್ದಾರೆ” ಎಂದು ಮೂಲವೊಂದು ರಾಯಿಟರ್ಸ್ಗೆ ತಿಳಿಸಿದೆ.
ಸೆಪ್ಟೆಂಬರ್ನಲ್ಲಿ ವಿನ್ಫಾಸ್ಟ್ ಭಾರತದಲ್ಲಿ ಮಾರಾಟ, ಕಾನೂನು ಮತ್ತು ಬ್ಯಾಕ್-ಆಫೀಸ್ ಉದ್ಯೋಗಗಳಿಗಾಗಿ ನೇಮಕ ಮಾಡಲು ಪ್ರಾರಂಭಿಸಿದೆ ಎಂದು ವರದಿಗಳು ಹೊರಬಂದಿದ್ದವು. ಆದಾಗ್ಯೂ, ವಿನ್ಫಾಸ್ಟ್ನ ಹೂಡಿಕೆ ಗಾತ್ರ ಮತ್ತು ತಮಿಳುನಾಡಿನಲ್ಲಿ ಕಾರ್ಯಾಚರಣೆಯ ಕಾಲಮಾನದ ಬಗ್ಗೆ ಸ್ಪಷ್ಟವಾಗಿಲ್ಲ.
ಅಕ್ಟೋಬರ್ನಲ್ಲಿ, ವಿನ್ಫಾಸ್ಟ್ ಭಾರತ ಮತ್ತು ಇಂಡೋನೇಷ್ಯಾದಲ್ಲಿ ವಾಹನ ಬಿಡಿಭಾಗ ಜೋಡಣೆಯ ಕಾರ್ಖಾನೆಗಳನ್ನು ನಿರ್ಮಿಸುವ ಯೋಜನೆಯನ್ನು ಬಹಿರಂಗಪಡಿಸಿತ್ತು. ವಾರ್ಷಿಕ 50,000 ಕಾರುಗಳ ಉತ್ಪಾದನಾ ಸಾಮರ್ಥ್ಯ ಮತ್ತು ಆರಂಭಿಕ ಬಂಡವಾಳ ವೆಚ್ಚವು 200 ಮಿಲಿಯನ್ ಡಾಲರ್ ವರೆಗೆ ತಲುಪಲಿದೆ. ಉತ್ಪಾದನೆಯು 2026 ರಲ್ಲಿ ಪ್ರಾರಂಭವಾಗಲಿದೆ ಎನ್ನುವ ಅಂದಾಜಿದೆ. ಕಂಪನಿಯು ಭಾರತೀಯ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳನ್ನು ಪರಿಚಯಿಸುವ ಅವಕಾಶಗಳನ್ನು ಅನ್ವೇಷಿಸುತ್ತಿದೆ.