ಸಮಾಜ-ಭಗವಂತನ ಸೇವೆಯಿಂದ ಮನುಷ್ಯನ ಬದುಕಿಗೆ ಸಾರ್ಥಕತೆ: ಪೇಜಾವರ ಶ್ರೀ

ಉಡುಪಿ: ಸಮಾಜದಿಂದ ಪಡೆದ ಸಂಪತ್ತಿನ ಸ್ವಲ್ಪ ಭಾಗವನ್ನು ನಾವು ಭಗವಂತ ಹಾಗೂ ಸಮಾಜಕ್ಕೆ ವಿನಿಯೋಗಿಸಬೇಕು. ಆಗ ಮನುಷ್ಯನ ಬದುಕಿಗೆ ಸಾರ್ಥಕತೆ ತುಂಬುತ್ತದೆ. ದೇವರ ಅನುಗ್ರಹ ಮತ್ತು ಸಮಾಜದ ಸಹಕಾರವಿಲ್ಲದೆ, ಯಾವ ವ್ಯಕ್ತಿಯೂ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಏರಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ
ಹೇಳಿದರು.
ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಭಾನುವಾರ ನಡೆದ ಉದ್ಯಮಿ ಭುವನೇಂದ್ರ ಕಿದಿಯೂರು ಅವರ ೭೫ರ ಸಂಭ್ರಮ ಮತ್ತು ರತ್ನೋತ್ಸವ- ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರನ್ನು ನಿತ್ಯ ಪೂಜಿಸುವವರಿಗೆ ಯಾವುದೇ ಭಯ ಇರುವುದಿಲ್ಲ. ದೇವರಿಂದ ದೂರದವರಿಗೆ ಮಾತ್ರ ಭಯ ಕಾಡುತ್ತದೆ. ಯಾರೂ ಕೂಡ ದೇವರು ಹಾಗೂ ದೇಶವನ್ನು ಮರೆಯಬಾರದು. ಭುವನೇಂದ್ರ ಕಿದಿಯೂರು ಅವರು ತಮ್ಮನ್ನು ದೇವರು ಹಾಗೂ ಜನರ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಇವರಿಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ಹಾರೈಸಿದರು.
ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಮಾತನಾಡಿ, ಬಡವರು ಹಾಗೂ ದೀನ ದಲಿತರಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಅವರ ಸೇವೆಯನ್ನು ಮಾಡಿದರೆ ಭಗವಂತ ಪೂರ್ಣ ಅನುಗ್ರಹ
ಸಿಗುತ್ತದೆ. ದೇಗುಲದಲ್ಲಿ ದೇವರ ಪೂಜೆ ಮಾಡುವ ಹಾಗೆಯೇ ಸಮಾಜದಲ್ಲಿ ದೀನ ದಲಿತರ ಸೇವೆ ಮಾಡಬೇಕು. ವ್ಯಕ್ತಿಯ ಪ್ರತಿಯೊಂದು ನಡೆಯೂ ಪರರಿಗೋಸ್ಕರವಾಗಿರಬೇಕು. ನಾವು ಸಮಾಜ ನೀಡಿದ ವಸ್ತುವಿನಿಂದಲೇ ಬದುಕುತ್ತಿದ್ದೇವೆ. ನಾವು ಬಳಸುವ ಪ್ರತಿಯೊಂದು ವಸ್ತು ಸಮಾಜದ ಕೊಡುಗೆ ಎಂದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹಕುಲಪತಿ ಡಾ. ಎಚ್‌.ಎಸ್‌. ಬಲ್ಲಾಳ್‌
ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ,
ಧರ್ಮಗುರು ವಲೇರಿಯನ್‌ ಮೆಂಡೊನ್ಸಾ, ಹಿರಿಯ ಜ್ಯೋತಿಷ್ಯ ವಿದ್ವಾಂಸ ಕಬಿಯಾಡಿ ಜಯರಾಮ ಆಚಾರ್ಯ, ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್‌, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಸತೀಶ್‌ ಪೈ, ಸಂಧ್ಯಾ ಪೈ ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು.
ಭುವನೇಂದ್ರ ಕಿದಿಯೂರು ಹಾಗೂ ಅವರ ಪತ್ನಿ ಹೀರಾ ಬಿ. ಕಿದಿಯೂರು ಉಪಸ್ಥಿತರಿದ್ದರು.
ಭುವನೇಂದ್ರ ಕಿದಿಯೂರು ಅಭಿನಂದನಾ ಸಮಿತಿಯ ಅಧ್ಯಕ್ಷ ಜಿ. ಶಂಕರ್‌ ಸ್ವಾಗತಿಸಿ,
ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್‌ ಪ್ರಸ್ತಾವನೆಗೈದರು. ಕಾರ್ಯದರ್ಶಿ ಮುರಳಿ ಕಡೆಕಾರ್‌ ನಿರೂಪಿಸಿ, ಕೆ. ಗಣೇಶ್‌ ರಾವ್‌ ವಂದಿಸಿದರು.