ಜಪಾನಿನಲ್ಲಿ 7.6 ತೀವ್ರತೆಯ ಭೂಕಂಪ: ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ

ಟೋಕಿಯೋ: ಸೋಮವಾರದಂಉ ಜಪಾನ್‌ನಲ್ಲಿ ಪ್ರಬಲ ಭೂಕಂಪಗಳ ಸರಣಿ ಸಂಭವಿಸಿದ್ದು, ದೇಶದ ವಾಯುವ್ಯ ಕರಾವಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ, ಭೂಕಂಪವು ಇಶಿಕಾವಾ ಮತ್ತು ಸಮೀಪದ ಪ್ರಾಂತ್ಯಗಳಲ್ಲಿ ಅಪ್ಪಳಿಸಿದ್ದು, ಅವುಗಳಲ್ಲಿ ಒಂದರ ಪ್ರಾಥಮಿಕ ತೀವ್ರತೆ 7.6 ರಷ್ಟಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ.

ಸ್ಥಳೀಯ ಹವಾಮಾನ ಸಂಸ್ಥೆಗಳ ಪ್ರಕಾರ, ಭೂಕಂಪದ ನಂತರ ಇಶಿಗಾವಾದಲ್ಲಿನ ನೋಟೊದಲ್ಲಿ ಭೂಕಂಪನದ ಕೇಂದ್ರದಿಂದ 300 ಕಿಲೋಮೀಟರ್‌ಗಳ ಒಳಗೆ ಸುನಾಮಿ ಅಲೆಗಳನ್ನು ಮುಂಗಾಣಲಾಗಿದೆ. ಸಂಜೆ 4:06 ಕ್ಕೆ (ಸ್ಥಳೀಯ ಕಾಲಮಾನ) 5.7 ತೀವ್ರತೆಯ ಭೂಕಂಪದೊಂದಿಗೆ ಕಂಪನಗಳು ಪ್ರಾರಂಭವಾಗಿದೆ.

ಬಳಿಕ ಸರಣಿಯಲ್ಲಿ ಭೂಕಂಪ ಸಂಭವಿಸಿದ್ದು 4.6 ರಿಂದ 7.6 ತೀವ್ರತೆಯ ಕಂಪನಗಳು ದ್ವೀಪ ರಾಷ್ಟ್ರವನ್ನು ಅಲುಗಾಡಿಸಿವೆ. ಜಪಾನಿನ ಸಾರ್ವಜನಿಕ ಪ್ರಸಾರಕ ಎನ್‌ಎಚ್‌ಕೆ ಪ್ರಕಾರ, ಇಶಿಕಾವಾದಲ್ಲಿ ನೊಟೊ ಕರಾವಳಿಗೆ 5 ಮೀಟರ್‌ಗಳಷ್ಟು ಅಲೆಗಳು ಅಪ್ಪಳಿಸಿದ್ದರಿಂದ ಜನರು ಕರಾವಳಿ ಪ್ರದೇಶಗಳನ್ನು ತ್ವರಿತವಾಗಿ ಬಿಟ್ಟು ಎತ್ತರದ ಕಟ್ಟಡಗಳು ಅಥವಾ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಒತ್ತಾಯಿಸಲಾಯಿತು.