ಬೆಂಗಳೂರು: ಈ ತಿಂಗಳ ಆರಂಭದಲ್ಲಿ ಸಂಸತ್ತಿನ ಭದ್ರತೆಯಲ್ಲಿ ಭಾರೀ ಲೋಪ ಎಸಗಿರುವ ಪ್ರಕರಣದಲ್ಲಿ ಅಪರಾಧಿಗಳ ಪಾಸ್ ವಿಷಯದಲ್ಲಿ ಸುದ್ದಿಯಾಗಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರನನ್ನು ಕೋಟ್ಯಂತರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕೇಂದ್ರ ಅಪರಾಧ ವಿಭಾಗದ ಸಂಘಟಿತ ಅಪರಾಧ ದಳದಿಂದ ಬಂಧಿಸಲ್ಪಟ್ಟಿರುವ ವಿಕ್ರಮ್ ಸಿಂಹ ಪ್ರಸ್ತುತ ಅರಣ್ಯ ಇಲಾಖೆಯ ವಶದಲ್ಲಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ ಮೌಲ್ಯದ 126 ಮರಗಳನ್ನು ಕಡಿದು ಬೇರೆಡೆ ಸಾಗಿಸಲಾಗಿದೆ. ಅಧಿಕೃತ ವರದಿಯು “ಲಭ್ಯವಿರುವ ದಾಖಲೆಯ ಸಾಕ್ಷ್ಯಗಳು” ಅವರು ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿದೆ. ತಲೆಮರೆಸಿಕೊಂಡಿದ್ದ ವಿಕ್ರಮ್ ಸಿಂಹನಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ವಿಕ್ರಮ್ ನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಲು ಅಧಿಕಾರಿಗಳು ಎಲೆಕ್ಟ್ರಾನಿಕ್ ಕಣ್ಗಾವಲು ಬಳಸಿದ್ದಾರೆ.
ಅರಣ್ಯ ಅಧಿಕಾರಿಗಳು ಸಂಘಟಿತ ಅಪರಾಧ ತಂಡದ ಜಂಟಿ ಕಾರ್ಯಾಚರಣೆಯಲ್ಲಿ ವಿಕ್ರಮ್ ಸಿಂಹನನ್ನು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ಕ್ರಮಕ್ಕಾಗಿ ವಿಕ್ರಮ್ ನನ್ನು ಹಾಸನಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ವರದಿ ಹೇಳಿದೆ.
ಈಗಾಗಲೇ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಪ್ರತಾಪ್ ಸಿಂಹ ಹೆಸರು ಕೇಳಿ ಬಂದ ನಂತರ ಪ್ರತಿಪಕ್ಷಗಳು ಕಿಡಿಕಾರುತ್ತಿವೆ. ಡಿಸೆಂಬರ್ 13 ರಂದು ಲೋಕಸಭೆಗೆ ಪ್ರವೇಶಿಸಿದ ರಾದ್ಧಾಂತ ಉಂಟುಮಾಡಿದವರಲ್ಲಿ ಒಬ್ಬ ಪ್ರತಾಪ್ ಸಿಂಹ ಕಚೇರಿಯಿಂದ ನೀಡಲಾದ ಸಂದರ್ಶಕರ ಪಾಸ್ ಹೊಂದಿದ್ದ. ಈ ವಿಷಯದಲ್ಲಿ ಪ್ರತಾಪ್ ಸಿಂಹ ಅವರನ್ನೂ ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಏತನ್ಮಧ್ಯೆ, ಅಕ್ರಮವಾಗಿ ಮರಕಡಿದು ಕಳ್ಳಸಾಗಣೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.