ನವದೆಹಲಿ: 25 ರ ಹರೆಯದ, ಪ್ರಸ್ತುತ ಓರ್ವ ವಂಚಕ ಮತ್ತು ಹಿಂದೆ ಹರಿಯಾಣದ U-19 ಕ್ರಿಕೆಟಿಗ ಮೃಣಾಂಕ್ ಸಿಂಗ್, ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ್ದಾನೆ. ಪ್ರತಿಷ್ಠಿತ ಬ್ರಾಂಡ್‌ಗಳು ಮತ್ತು ಜನರನ್ನು ವಂಚಿಸಲು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವ ಈತ ಹಲವರಿಗೆ ಇದೇ ರೀತಿ ಟೋಪಿ ಹಾಕಿದ್ದಾನೆ.
ಐಷಾರಾಮಿ ಜೀವನಕ್ಕಾಗಿ ತಾನು ಪ್ರಸಿದ್ದ ವ್ಯಕ್ತಿ ಎಂಬಂತೆ ಬಿಂಬಿಸುತ್ತಿದ್ದ ಈತ 2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್‌ಗಾಗಿ ಆಡಿದ IPL ಕ್ರಿಕೆಟಿಗನಂತೆ ಪೋಸ್ ನೀಡುತ್ತಿದ್ದ. ಮಹಿಳೆಯರ ಮೇಲೆ ಪ್ರಭಾವ ಬೀರಲು, ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಲು ಮತ್ತು ಬಿಲ್‌ಗಳನ್ನು ಪಾವತಿಸದೆ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿಯಲು ಆತ ತಾನು ಕ್ರಿಕೆಟಿಗನೆಂದು ಹೇಳಿಕೊಳ್ಳುತ್ತಿದ್ದ.
ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಸೇರಿದಂತೆ ಈತ ಹಲವು ಮಂದಿಗೆ ಮೋಸ ಮಾಡಿದ್ದಾನೆ. 2020-2021ರಲ್ಲಿ ಪಂತ್ ಗೆ 1.63 ಕೋಟಿ ವಂಚಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈತ ಕ್ಯಾಬ್ ಡ್ರೈವರ್‌ಗಳು, ಯುವತಿಯರು, ಬಾರ್‌ಗಳು, ರೆಸ್ಟೋರೆಂಟ್‌ಗಳು ಎಲ್ಲರಿಗೂ ಯಾಮಾರಿಸಿದ್ದಾನೆ. Instagram ಖಾತೆಯಲ್ಲಿ 40,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಈತ ತನ್ನ “ಐಷಾರಾಮಿ ಜೀವನಶೈಲಿ” ಯ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾನೆ.
2022 ರಲ್ಲಿ, ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದ ಈತ 5.53 ಲಕ್ಷ ಬಿಲ್ ಕಟ್ಟದೆ ಐಷಾರಾಮಿ ಹೋಟೆಲ್ ತೊರೆದಿದ್ದ. ಹೋಟೇಲ್ ಮಾಲೀಕರ ದೂರಿನಂತೆ ಈತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಘಟನೆ ನಡೆದ ಸುಮಾರು ಒಂದು ವರ್ಷದ ನಂತರ ಡಿಸೆಂಬರ್ 25 ರಂದು ಹಾಂಗ್ ಕಾಂಗ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ದೆಹಲಿ ವಿಮಾನ ನಿಲ್ದಾಣದ ವಲಸೆ ಕಚೇರಿಯಲ್ಲಿ ಬಂಧಿಸಲಾಗಿದೆ.
ಬಂಧನದಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ಕುಮಾರ್‌ನಂತೆ ಪೋಸ್ ನೀಡಿ ಅಧಿಕಾರಿಗಳಿಗೆ ಕರೆ ಮಾಡಿ ಯಾಮಾರಿಸಿದ್ದ ಎಂದು ವರದಿ ಹೇಳಿದೆ.