ಬೆಂಗಳೂರು: ನಗರದ ಪ್ರತಿಷ್ಠಿತ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಯುನಿವರ್ಸಲ್ ಫಸ್ಟ್ ಏಜ್ ಮಕ್ಕಳ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಜನವರಿ 7 ರಂದು ಆಯೋಜಿಸಿದೆ. ಸುಮಾರು 400 ಉದಯೋನ್ಮುಖ ಚೆಸ್ ಆಟಗಾರರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವಿವಿಧ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ತರಬೇತಿಗೆ ಪ್ರಸಿದ್ದವಾಗಿರುವ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಆಯೋಜಿಸುತ್ತಿರುವ ಈ ಚೆಸ್ ಪಂದ್ಯಾವಳಿ ಅಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. ಪಂದ್ಯಾವಳಿಯ ಒಟ್ಟು ಸುತ್ತುಗಳ ಸಂಖ್ಯೆ ಮತ್ತು ಸುತ್ತಿನ ವೇಳಾಪಟ್ಟಿಯನ್ನು ಅಂದು ಬೆಳಗ್ಗೆ ಅಲ್ಲೇ ಪ್ರಕಟಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಈ ಪಂದ್ಯಾವಳಿಯು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಉಪಕ್ರಮದ ಭಾಗವಾಗಿದ್ದು ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಕೆ ಎಸ್ ಸಿ ಎ ಮತ್ತು ಬಿ ಯು ಡಿ ಸಿ ಎ ಸಹಯೋಗದೊಂದಿಗೆ ಕಾಲೇಜಿನ ಗುರುರಾಯನಪುರ, ಕೋಳೂರು, ರಾಮೋಹಳ್ಳಿ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು 120 ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಗುವುದು. ಫಿಡೆಯ ಇತ್ತೀಚಿನ ನಿಯಮಗಳ ಪ್ರಕಾರ ಪಂದ್ಯಾವಳಿ ನಡೆಯಲಿದ್ದು, ಸ್ವಿಸ್ ವ್ಯವಸ್ಥೆಯನ್ನು ಅನುಸರಿಸಲಾಗುವುದು.
7 ವರ್ಷ, 9 ವರ್ಷ, 11 ವರ್ಷ, 13 ವರ್ಷ, 15 ವರ್ಷ ಮತ್ತು 19 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ವಿಭಾಗದಲ್ಲಿ 10 ಟ್ರೋಫಿಗಳನ್ನು ನೀಡಲಾಗುವುದು.
ಶ್ರೀಪಾದ್ ಕೆ.ವಿ. ಅವರು ಕಾರ್ಯಕ್ರಮದ ಮುಖ್ಯ ತೀರ್ಪುಗಾರ. ಆಸಕ್ತರು ಜನವರಿ 5 ರಂದು 6 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬಹುದು. “ಸ್ಥಳದಲ್ಲಿ ನೋಂದಣಿ ಅವಕಾಶವಿಲ್ಲ” ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ಭಾಗವಹಿಸುವ ಎಲ್ಲಾ ಆಟಗಾರರಿಗೆ ಇ – ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಸಮೀಪದ ಚಲ್ಲಘಟ್ಟ ಮೆಟ್ರೊ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು.
ಆಸಕ್ತರು ಮಾಹಿತಿಗಾಗಿ ಹಾಗೂ ಹೆಸರನ್ನು ನೋಂದಾಯಿಸಲು ಸಂತೋಷ್ : 9686664985, ನಳಿನಿ: 9740182248 ಅವರನ್ನು ಸಂಪರ್ಕಿಸಬಹುದು.