ದೆಹರಾದೂನ್: ಉತ್ತರಾಖಂಡದ ಹರಿದ್ವಾರದಲ್ಲಿ ಬುಧವಾರ ಕಾಡಾನೆಯೊಂದು ನ್ಯಾಯಾಲಯದ ಆವರಣದೊಳಕ್ಕೆ ನುಗ್ಗಿದ್ದರಿಂದ ಕೋರ್ಟಿನಲ್ಲಿ ಗೊಂದಲ ಉಂಟಾಗಿದೆ. ಹರಿದ್ವಾರದ ರೋಶನಾಬಾದ್ ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ.
ಕಾಡಾನೆಯು ಸಮೀಪದ ರಾಜಾಜಿ ಹುಲಿ ಸಂರಕ್ಷಿತಾರಣ್ಯದಿಂದ ನುಸುಳಿದೆ ಎಂದು ನಂಬಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮತ್ತು ನ್ಯಾಯಾಲಯದ ಆವರಣವನ್ನು ದಾಟಿ ಅವ್ಯವಸ್ಥೆಯನ್ನು ಸೃಷ್ಟಿಸಿದೆ. ಆನೆ ತನ್ನ ಅನಿರೀಕ್ಷಿತ ಭೇಟಿಯ ಸಮಯದಲ್ಲಿ ಗೇಟ್‌ಗಳನ್ನು ಮುರಿದು ಗೋಡೆಗೆ ಹಾನಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ಅನಿರೀಕ್ಷಿತ ಪರಿಸ್ಥಿತಿಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದ್ದಾರೆ. ಆನೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪ್ರಾಣಿಯನ್ನು ಬೆದರಿಸಿ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಕಡೆಗೆ ತೆರಳುವಂತೆ ಮಾಡಿದ್ದಾರೆ.