ಬೆಂಗಳೂರು: ನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳ ಸಮೀಕ್ಷೆ ನಡೆಸಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಕುರಿತು ಮಂಗಳವಾರ ಸಭೆ ನಡೆಸಿ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಅನುಷ್ಠಾನ ಮಾಡಬೇಕು. ಕನ್ನಡ ಭಾಷೆಯ ನಾಮಫಲಕಗಳನ್ನು ಬಳಸದಿರುವ ಮಳಿಗೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅನುಷ್ಠಾನಗೊಳಿಸಲು ಗಡುವು ನೀಡಿಬೇಕು. ಒಂದು ವೇಳೆ ನಾಮಫಲಕ ಬದಲಾಯಿಸದಿದ್ದಲ್ಲಿ ವಾಣಿಜ್ಯ ಪರವಾನಗಿಯನ್ನು ಅಮಾನತುಗೊಳಿಸಬೇಕು. ನಂತರ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಅವರು ನಿರ್ದೇಶಿಸಿದ್ದಾರೆ.
ನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳ ಸಮೀಕ್ಷೆ ಕಾರ್ಯ 15 ದಿನಗಳಲ್ಲಿ ಪೂರ್ಣಗೊಳಿಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಮಾಲ್ ಗಳ ಮಾಲೀಕರೊಂದಿಗೆ ಸಭೆ ನಡೆಸಿ ಮಾಲ್ ಗಳಲ್ಲಿರುವ ಎಲ್ಲಾ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಇರುವ ನಾಮಫಲಕಗಳನ್ನು ಅಳವಡಿಸಲು ಸೂಚಿಸಿ ಎಚ್ಚರಿಕೆ ನೀಡಬೇಕೆಂದು ತಿಳಿಸಿದ್ದಾರೆ.
ನಗರದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಫೆ.28 ರೊಳಗೆ ಶೇ. 60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಈ ಸಂಬಂಧ ಎಲ್ಲಾ ವಲಯಗಳಲ್ಲೂ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.