ಅತ್ಯಪರೂಪದ ಪ್ರಕರಣ : ವಾಷಿಂಗ್ಟನ್ ನಲ್ಲಿ 20 ಗಂಟೆ ಅಂತರದಲ್ಲಿ 2 ಮಕ್ಕಳ ಹೆತ್ತ ತಾಯಿ

ವಾಷಿಂಗ್ಟನ್ : ಡಿಸೆಂಬರ್ 19ರಂದು ಮಂಗಳವಾರ ಸಂಜೆ ತನ್ನ ಮೊದಲ ಮಗು ರಾಕ್ಸಿ ಲೈಲಾಗೆ, ಡಿಸೆಂಬರ್ 20ರ ಬೆಳಗ್ಗೆ ಎರಡನೇ ಮಗು ರೆಬೆಲ್ ಲೆಕಾನ್​ಗೆ ಜನ್ಮ ನೀಡಿದ್ದಾರೆ.

ಎರಡು ಗರ್ಭಾಶಯಗಳಿಂದ ಮಹಿಳೆಯೊಬ್ಬರು 20 ಗಂಟೆ ಅಂತರದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಅಮೆರಿಕದ ಅಲಬಾಮಾದಲ್ಲಿ ನಡೆದಿದೆ. ಕೆಲ್ಸಿ ಹ್ಯಾಚರ್ (32) ಎಂಬ ಮಹಿಳೆ 20 ಗಂಟೆಗಳ ಹೆರಿಗೆ ನೋವಿನ ನಂತರ ಎರಡು ಆರೋಗ್ಯವಂತ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಕೆಲ್ಸಿ ಈಗಾಗಲೇ ಮೂರು ಮಕ್ಕಳ ತಾಯಿಯಾಗಿದ್ದರು. ಆಶ್ಚರ್ಯ ವೆಂದರೆ ಈ ಮೊದಲು ಎರಡೂ ಗರ್ಭಾಶಯಗಳಿಂದ ಗರ್ಭಿಣಿಯಾಗಿರಲಿಲ್ಲ. ಆಕೆಯ ಗರ್ಭಾವಸ್ಥೆ ಬಹಳ ಅಪರೂಪವಾಗಿದ್ದು, ದೊಡ್ಡ ಅಪಾಯಕ್ಕೀಡಾಗಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ತಾಯಿ ಮತ್ತು ಮಕ್ಕಳ ಆರೋಗ್ಯ ಸಹಜ ಸ್ಥಿತಿಯಲ್ಲಿದ್ದು, ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ. ಈ ರೀತಿಯ ಗರ್ಭಧಾರಣೆ ಮತ್ತು ಜನನವನ್ನು ನಾವು ಯೋಚಿಸಿರಲಿಲ್ಲ. ಆದರೆ ಎರಡೂ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಈ ಜಗತ್ತಿಗೆ ಕರೆತರುವುದು ನಮ್ಮ ಕನಸಾಗಿತ್ತು ಎಂದು ಕೆಲ್ಸಿ ಹೇಳಿದ್ದಾರೆ.

ಇದು ವೈದ್ಯರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ. ಕೆಲ್ಸಿ ಹ್ಯಾಚರ್ 17ರ ವಯಸ್ಸಿನಲ್ಲಿ ಇದ್ದಾಗಲೇ ಅವರಲ್ಲಿ ಎರಡು ಗರ್ಭಾಶಯ ಇರುವುದನ್ನು ಗುರುತಿಸಲಾಗಿತ್ತು, ಇದನ್ನು ಯುಟಿರಸ್ ಡಿಡೆಲ್ಪಿಸ್ ಎಂದು ಕರೆಯುತ್ತಾರೆ. ಇದು ಅಪರೂಪದ ಜನ್ಮಜಾತ ಸಮಸ್ಯೆಯಾಗಿದ್ದು, 50 ದಶಲಕ್ಷ ಮಹಿಳೆಯರ ಪೈಕಿ ಒಬ್ಬರಲ್ಲಿ ಮಾತ್ರ ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ.