ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ನಿರ್ಧಾರವನ್ನು ವಾಪಸ್ ಪಡೆಯುವ ಬಗ್ಗೆ ಹೇಳಿಕೆಗಳು ದಿನೇ ದಿನೇ ಕಾವೇರುತ್ತಿದ್ದು ಪ್ರತಿಪಕ್ಷ ಬಿಜೆಪಿ ಕೆಂಡಾಮಂಡಲವಾಗಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಆಳವಾಗಿ ಪರಿಶೀಲಿಸಿದ ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಹಿಜಾಬ್ ಬಗ್ಗೆ ನಾವು ಯಾವುದೇ ಆದೇಶ ನೀಡಿಲ್ಲ, ಒಂದು ವೇಳೆ ಮಾಡಿದ್ದರೂ ಪರಿಶೀಲಿಸುತ್ತೇವೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇದನ್ನು ಆಳವಾಗಿ ಪರಿಶೀಲಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜಿ ಪರಮೇಶ್ವರ ಎಎನ್ಐಗೆ ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕ ಕೆಟಿ ರಾಮರಾವ್ ಭಾನುವಾರ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಇನ್ನೂ ತೆಗೆದುಹಾಕಿಲ್ಲ ಮತ್ತು ಅವರು ಇನ್ನೂ ಅದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹೇರಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ತಮ್ಮ ಸರ್ಕಾರ ಹಿಂತೆಗೆದುಕೊಳ್ಳಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ ನಂತರ ಹಿಜಾಬ್ ವಿಷಯದ ಚರ್ಚೆ ಮತ್ತೆ ಮಹತ್ವ ಪಡೆದುಕೊಂಡಿದೆ.
ಹಾಲಿ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚುವ ಜತೆಗೆ ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯದೆಲ್ಲೆಡೆ ಹಿಜಾಬ್ ನಿಷೇಧಿಸಿಲ್ಲ ಆದರೆ ವಸ್ತ್ರ ಸಂಹಿತೆ ಇರುವ ಕಡೆ ಅವಕಾಶ ನೀಡಿಲ್ಲ. ಮುಸ್ಲಿಂ ಮಹಿಳೆಯರಿಗೆ ಎಲ್ಲೆಡೆ ಹಿಜಾಬ್ ಧರಿಸಲು ಅನುಮತಿ ಇದೆ. ಹಿಜಾಬ್ ಅನ್ನು ನಿಷೇಧಿಸದಿರುವಾಗ ನಿಷೇಧವನ್ನು ತೆಗೆದುಹಾಕುವ ಪ್ರಶ್ನೆ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧ ಹೇರಿತ್ತು. ಈ ವಿಷಯವು ಕರ್ನಾಟಕ ಹೈಕೋರ್ಟ್ ಅಂಗಳ ತಲುಪಿದ್ದು, ಕೋರ್ಟು ಆಗಿನ ಬಿಜೆಪಿ ಸರ್ಕಾರ ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ವಿಭಜನೆ ತೀರ್ಪು ನೀಡಿದ್ದು, ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುವಂತೆ ಮಾಡಿದೆ.