ಶಿರೂರು ಶ್ರೀಗಳ‌ ಅವಹೇಳನದ ವಿರುದ್ಥ ನಿರಂತರ ಹೋರಾಡುವೆ: ಕೇಮಾರು

ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಗೆ ಆಗಿರುವ ಅನ್ಯಾಯದ ಬಗ್ಗೆ ಆಕ್ರೋಶವಿದೆ. ಆದರೆ ಪೂರ್ವಾಗ್ರಹ ಪೀಡಿತಕ್ಕೊಳಗಾಗಿ ಹೋರಾಟ ನಡೆಸುತ್ತಿಲ್ಲ. ಶ್ರೀಗಳ ವಿರುದ್ಧ ನಿಂತರು ನಾನು ಹೋರಾಟ ಬಿಡುವುದಿಲ್ಲ. ನನ್ನ ಉಸಿರಿರುವ ವರೆಗೆ ಶ್ರೀಗಳಿಗೆ ಅವಹೇಳನ ಮಾಡುವವರ ವಿರುದ್ಧ ಹೋರಾಡುತ್ತೇನೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರ್ಷ ಕಳೆದ ಹಿನ್ನಲೆಯಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿರೂರು ಶ್ರೀಪಾದರು ಬಡಜನರಿಗೆ ಹತ್ತಿರವಾಗಿದ್ದರು. ಅವರಿಗೆ ಶ್ರೀಕೃಷ್ಣಮಠವನ್ನು ಪರಿಚಯಿಸಿದ್ದರು. ಶ್ರೀಗಳು ಜೀವಿತಾವಧಿಯಲ್ಲಿ ತೊಂದರೆ ಮಾಡುತ್ತಿರುವವರ ವಿರುದ್ಧ ದೂರು ನೀಡಿದ್ದರೂ ಪೊಲೀಸರಿಗೆ ಅವರ ವಿರುದ್ಧ ತನಿಖೆ ಮಾಡುವ ಶಕ್ತಿ ಇರಲಿಲ್ಲ. ಆದರೆ ಶ್ರೀಗಳ ಆಪ್ತರು, ಅಡುಗೆ ಮಾಡುತ್ತಿದ್ದವರಿಗೆ ದರ್ಪ ತೋರಿಸಿದ್ದಾರೆ ಎಂದರು.
ಹಿರಿಯ ವಕೀಲ ರವಿಕಿರಣ್‌ ಮುರ್ಡೇಶ್ವರ ಮಾತನಾಡಿ, ಶ್ರೀಗಳು ಆಧ್ಯಾತ್ಮಿಕ ವಿಚಾರದಲ್ಲಿ ಶಿರೂರು ಶ್ರೀಪಾದರು ಅಷ್ಟೊಂದು ಸಾಧನೆ ಮಾಡದಿದ್ದರೂ, ಅತ್ಯುತ್ತಮ ಸಾಧನೆ ಮಾಡಿದ ಸ್ವಾಮೀಜಿಗಳಿಗಿಂತ ಅವರು ಕಡಿಮೆ ಇರಲಿಲ್ಲ. ಶ್ರೀಗಳ ಸಾವು ರಹಸ್ಯದಿಂದ ಕೂಡಿದೆ. ಅವರ ಸಾವಿಗೆ ಸಂಬಂಧಿಸಿದ ಕಡತ, ವೈದ್ಯಕೀಯ ವರದಿಗಳನ್ನು ನೋಡಿದರೆ ಅನುಮಾನ ಮೂಡುತ್ತದೆ ಎಂದರು.
ಪತ್ರಕರ್ತ ಶ್ರೀಕಾಂತ್‌ ಶೆಟ್ಟಿ ಶ್ರೀಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಿರೂರು ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಕೊಡಮಾಡಿದ ಸಮವಸ್ತ್ರಗಳನ್ನು ಸ್ಪಂದನ ಆಶ್ರಮದ ಮಕ್ಕಳಿಗೆ ಹಾಗೂ ವೃದ್ಧರಿಗೆ ವಿತರಿಸಲಾಯಿತು.
ಪಾಡುರಂಗ ಭಜನ ಮಂಡಳಿಯ ಶಿವಾನಂದ ಹಾಗೂ ಬಳಗದವರಿಂದ ಭಜನೆ ಕಾರ್ಯಕ್ರಮ ನಡೆಯಿತು.
ಬಡಗುಬೆಟ್ಟು ಸೊಸೈಟಿಯ ಆಡಳಿತ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಾಯಿರಾಧ ಡೆವಲಪರ್ಸ್‌ನ ಮನೋಹರ ಶೆಟ್ಟಿ, ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ನವೀನ್‌, ಭಾಸ್ಕರ್‌ ಗುಂಡಿಬೈಲು ಮೊದಲಾದವರು ಉಪಸ್ಥಿತರಿದ್ದರು. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು.