ಉಡುಪಿ: ಮಣಿಪಾಲ ಹಾಗೂ ಉಡುಪಿ ಸುತ್ತಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1948ರಲ್ಲಿ ಪ್ರಾರಂಭಗೊಂಡ ಮಣಿಪಾಲ ಪದವಿ ಪೂರ್ವ ಕಾಲೇಜು ಇದೀಗ 75 ವರ್ಷಗಳನ್ನು ಪೂರ್ಣಗೊಳಿಸಿದ್ದು, ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಡಿ. 27 ರಿಂದ 30 ರವರೆಗೆ ‘ಅಮೃತ ಪರ್ವ’ವನ್ನು ಆಚರಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ರೂಪ ಎಲ್.ಭಟ್ ತಿಳಿಸಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1970ರವರೆಗೆ ಇದು ಮಣಿಪಾಲ ಹೈಸ್ಕೂಲ್ ಆಗಿದ್ದು, 1971ರಿಂದ ಪದವಿ ಪೂರ್ವ ತರಗತಿಗಳು ಪ್ರಾರಂಭಗೊಂಡು ಮಣಿಪಾಲ ಜೂನಿಯರ್ ಕಾಲೇಜಾಗಿ ಮೇಲ್ದರ್ಜೆಗೇರಿತು. ಡಾ.ಟಿಎಂಎ ಪೈ ಸಂಚಾಲಕತ್ವದಲ್ಲಿ ಪ್ರಾರಂಭಗೊಂಡ ಈ ವಿದ್ಯಾಸಂಸ್ಥೆಯು ಟಿ.ರಮೇಶ್ ಪೈ ಹಾಗೂ ಟಿ.ಸುಧಾಕರ ಪೈ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದೆ ಎಂದರು.
ಕಳೆದ ಜ.1ರಿಂದ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಇದೀಗ ಅಮೃತ ಪರ್ವ ನಡೆಯಲಿದೆ. ಡಿ.18ರಂದು ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ 2024ರ ಕ್ಯಾಲೆಂಡರ 2024ರ ಕ್ಯಾಲೆಂಡರ್ ಬಿಡುಗಡೆಗೊಂಡಿದ್ದು, ಮಣಿಪಾಲ ಹಾಗೂ ಉಡುಪಿಯ ಎಲ್ಲ ಮನೆಗಳಿಗೆ ವಿತರಿಸಲಾಗುತ್ತದೆ ಎಂದರು.
ಡಿ. 24ರ ರವಿವಾರ ಎಂಜೆಸಿಯ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ನಡೆಯಲಿದೆ. ಆ ದಿನ ಬೆಳಗ್ಗೆ 8:00 ಗಂಟೆಗೆ ಹಳೆ ವಿದ್ಯಾರ್ಥಿಗಳು ಆಗಮಿಸಿ ನಿವೃತ್ತ ಶಿಕ್ಷಕರು, ಉಪನ್ಯಾಸಕರಿಂದ ಹಿಂದಿನಂತೆ ಪಾಠಪ್ರವಚನಗಳನ್ನು ಕೇಳಲಿದ್ದಾರೆ. ಬಳಿಕ ತರಗತಿಯ ಹಾಜರಾತಿ, ಪಾಠಗಳು ನಡೆಯಲಿವೆ. ಬಳಿಕ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಫುಟ್ಬಾಲ್ ಪಂದ್ಯಾಟವೂ ನಡೆಯಲಿದೆ. ಇದರಲ್ಲಿ 1948ರಿಂದ ಕಳೆದ ವರ್ಷದವರೆಗಿನ ಹಳೆವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಡಿ.27ರಂದು ‘ಅಮೃತಾರಂಭ’ ನಡೆಯಲಿದ್ದು, ಶೈಕ್ಷಣಿಕ ವಸ್ತುಪ್ರದರ್ಶನ ಉದ್ಘಾಟನೆ, ನವೀಕೃತ ಕೊಠಡಿಗಳ ಉದ್ಘಾಟನೆ, ರಂಗಮಂಟಪದ ಉದ್ಘಾಟನೆ ನಡೆಯಲಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ ಎಂದರು.
ಡಿ. 28ರಂದು ಅಮೃತ ಸಿಂಚನ ಕಾರ್ಯಕ್ರಮವನ್ನು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಿ.29ರಂದು ಅಮೃತ ಸಂಗಮ, ಗೌರವಾರ್ಪಣೆ ನಡೆಯಲಿದ್ದು, ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಇದನ್ನು ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.30ರಂದು ಅಮೃತ ಸಂಹರ್ಷ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಅನಿತಾ ಮಲ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕಿಣಿ, ಕಾರ್ಯದರ್ಶಿ ಜಯರಾಮ ಶೆಟ್ಟಿಗಾರ್, ಟ್ರಸ್ಟ್ನ ಸಂಚಾಲಕ ಪ್ರಕಾಶ್ ಶೆಟ್ಟಿ, ಟ್ರಸ್ಟಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.