ನವದೆಹಲಿ : ಸರಿಸುಮಾರು 1.5 ಮಿಲಿಯನ್ ಎಂಜಿನಿಯರಿಂಗ್ ಪದವೀಧರರು ಐಟಿ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದು, ಉದ್ಯಮಗಳು ವಿಶಿಷ್ಟ ಕೌಶಲಗಳನ್ನು ಹೊಂದಿದ ಅಭ್ಯರ್ಥಿಗಳನ್ನು ಹುಡುಕಾಡುತ್ತಿರುವುದು ಮತ್ತು ಮಂದಗತಿಯ ನೇಮಕಾತಿಗಳು ಗೊಂದಲದ ವಾತಾವರಣ ಸೃಷ್ಟಿಸಿವೆ.
ಪದವಿ ಶಿಕ್ಷಣ ಮುಗಿಸಿ ಐಟಿ ಉದ್ಯಮದಲ್ಲಿ ಕೆಲಸಕ್ಕೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳ ಪೈಕಿ ಕೇವಲ ಶೇ 45ರಷ್ಟು ಜನ ಮಾತ್ರ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಹೊಂದಿದ್ದು, ನೇಮಕಾತಿಗೆ ಅರ್ಹವಾಗಿರುತ್ತಾರೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.ಐಟಿ ಅಥವಾ ತಂತ್ರಜ್ಞಾನ ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳ ಪೈಕಿ ಶೇ 45ರಷ್ಟು ಜನ ಮಾತ್ರ ಉದ್ಯಮಕ್ಕೆ ಬೇಕಾದ ಕೌಶಲಗಳನ್ನು ಹೊಂದಿರುತ್ತಾರೆ ಎಂದು ವರದಿ ಹೇಳಿದೆ.
ಅಂದರೆ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸಿದ್ಧವಾಗುವ ಅಭ್ಯರ್ಥಿಗಳಲ್ಲಿ ಕೌಶಲದ ಕೊರತೆ ಎದ್ದು ಕಾಣುತ್ತಿದೆ. ಹಣಕಾಸು ವರ್ಷ 2024ರಲ್ಲಿ ಸುಮಾರು 1.55 ಲಕ್ಷ ಹೊಸ ಪದವೀಧರರು (ಫ್ರೆಶರ್ಸ್) ಐಟಿ ಅಥವಾ ತಂತ್ರಜ್ಞಾನ ವಲಯದಲ್ಲಿ ನೇಮಕವಾಗುವ ಸಾಧ್ಯತೆಯಿದೆ. ಹಣಕಾಸು ವರ್ಷ 2023ರಲ್ಲಿ ಈ ಸಂಖ್ಯೆ 2.3 ಲಕ್ಷ ಆಗಿತ್ತು.
ಜಾಗತಿಕ ಸಾಮರ್ಥ್ಯ ಕೇಂದ್ರಗಳು (Global capability centers – GCCs) ಮತ್ತು ತಂತ್ರಜ್ಞಾನೇತರ ಕ್ಷೇತ್ರಗಳಾದ ಬಿಎಫ್ಎಸ್ಐ, ಸಂವಹನ, ಮಾಧ್ಯಮ ಮತ್ತು ತಂತ್ರಜ್ಞಾನ, ರಿಟೇಲ್ ಮತ್ತು ಗ್ರಾಹಕ ವ್ಯವಹಾರ, ಜೀವ ವಿಜ್ಞಾನ ಮತ್ತು ಆರೋಗ್ಯ, ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಇಂಧನ ಮತ್ತು ಸಂಪನ್ಮೂಲ ವಲಯಗಳಲ್ಲಿ ಫ್ರೆಶರ್ಸ್ಗಳ ನೇಮಕಾತಿ ಹೆಚ್ಚಾಗುತ್ತಿದೆ ಎಂದು ಟೀಮ್ ಲೀಸ್ ಡಿಜಿಟಲ್ ವರದಿ ತಿಳಿಸಿದೆ.
ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್, ಸಾಫ್ಟ್ವೇರ್ ಅಭಿವೃದ್ಧಿ ವಿಧಾನಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಅನಾಲಿಟಿಕ್ಸ್ನಲ್ಲಿ ತಾಂತ್ರಿಕ ಪ್ರಾವೀಣ್ಯತೆಯನ್ನು ಒಳಗೊಂಡಿರುವ ಸಂವಹನ, ಸಮಸ್ಯೆ-ಪರಿಹಾರ, ತಂಡವಾಗಿ ಕೆಲಸ, ಭಾವನಾತ್ಮಕ ಬುದ್ಧಿಮತ್ತೆ ಇತ್ಯಾದಿಗಳಂಥ ಸಾಫ್ಟ್ ಸ್ಕಿಲ್ ಮತ್ತು ಹಾರ್ಡ್ ಸ್ಕಿಲ್ ಎರಡನ್ನೂ ಹೊಂದಿರುವ ಕುಶಲ ಅಭ್ಯರ್ಥಿಗಳನ್ನು ಕಂಪನಿಗಳು ಹುಡುಕುತ್ತಿವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಸಂಸ್ಥೆಗಳು ತಮ್ಮ ಪಠ್ಯಕ್ರಮದಲ್ಲಿ ಉದ್ಯಮ-ನಿರ್ದಿಷ್ಟ ತರಬೇತಿ ಮಾದರಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ ಎಂದು ವರದಿ ಒತ್ತಿಹೇಳಿದೆ.
ಟೀಮ್ ಲೀಸ್ ಡಿಜಿಟಲ್ ವರದಿಯ ಪ್ರಕಾರ, ಭಾರತೀಯ ಐಟಿ ಉದ್ಯಮವು 2023-24ರ ಹಣಕಾಸು ವರ್ಷದಲ್ಲಿ ಶೇಕಡಾ 10 ರಷ್ಟು ಎಂಜಿನಿಯರಿಂಗ್ ಪದವೀಧರರನ್ನು ನೇಮಿಸಿಕೊಳ್ಳಲು ಸಜ್ಜಾಗಿದೆ. ಪ್ರಮುಖ ಐಟಿ ಕಂಪನಿಗಳು ಫ್ರೆಶರ್ಸ್ಗಳ ನೇಮಕಾತಿಯನ್ನು ಸ್ಥಗಿತಗೊಳಿಸಿರುವ ಮಧ್ಯೆ ಅವರಿಗೆ ಬೇರೆ ವಲಯಗಳಲ್ಲಿ ಅವಕಾಶಗಳು ಸೃಷ್ಟಿಯಾಗುತ್ತಿವೆ.