ಮಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ವಹಿವಾಟು ಮತ್ಸೋದ್ಯಮ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ಹೊಂದಿದೆ. ಮೀನುಗಾರಿಕೆಯ ಈ ಉದ್ಯಮದಲ್ಲಿ ಸಾವಿರಾರು ಮಂದಿ ತೊಡಗಿಸಿಕೊಂಡಿದ್ದಾರೆ. ಕಡಲಿನಾಳಕ್ಕೆ ಹೋಗಿ ಮೀನುಗಾರಿಕೆ ನಡೆಸುವಾಗ ಕಡಲಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಶೀಘ್ರ ಚಿಕಿತ್ಸೆಗೆ ಕರೆದುಕೊಂಡು ಬರುವ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘ ಹೊಸ ಪ್ರಯತ್ನವೊಂದನ್ನು ಮಾಡಿದೆ.ಮೀನುಗಾರಿಕೆ ವೇಳೆ ಮೀನುಗಾರರಿಗೆ ಆರೋಗ್ಯದ ಸಮಸ್ಯೆ ಉಂಟಾದರೆ ಶೀಘ್ರ ಚಿಕಿತ್ಸೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಬೋಟ್ ಸಿದ್ಧಪಡಿಸಲಾಗುತ್ತಿದೆ.
ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ವೇಳೆ ಮೀನುಗಾರರಿಗೆ ಅಪಾಯವಾದರೆ ರಕ್ಷಿಸಲು ಎಮರ್ಜೆನ್ಸಿ ಬೋಟ್ (ಬೋಟ್ ಆಂಬ್ಯುಲೆನ್ಸ್) ಮಾಡುವ ಯೋಜನೆಯನ್ನು ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘ ರೂಪಿಸಿದೆ. ಇದರ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಬೋಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಗರದ ಕಡೆಕಾರ್ ನಲ್ಲಿರುವ ಬೋಟ್ ನಿರ್ಮಾಣ ಯಾರ್ಡ್ನಲ್ಲಿ ಬೋಟ್ ಆಂಬ್ಯುಲೆನ್ಸ್ ನಿರ್ಮಾಣವಾಗುತ್ತಿದೆ. ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬೋಟ್ ಆಂಬ್ಯುಲೆನ್ಸ್ಗೆ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘ ಮತ್ತು ದಾನಿಗಳ ಸಹಕಾರದಿಂದ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ.
ಮಳೆಗಾಲದಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ: ಮಳೆಗಾಲದ ಸಂದರ್ಭದಲ್ಲಿ ಮೀನುಗಾರಿಕೆಗೆ ರಜೆ ಇರುವುದರಿಂದ ಆ ಸಂದರ್ಭದಲ್ಲಿ ಕಡಲಿಗೆ ಬೋಟ್ ಆಂಬ್ಯುಲೆನ್ಸ್ ಇಳಿಯುವುದಿಲ್ಲ. ಆದರೆ ಆ ಸಂದರ್ಭದಲ್ಲಿ ನೆರೆ ಹಾನಿ ಆಗುವುದರಿಂದ ನೆರೆ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್, “ಆರು ತಿಂಗಳ ಮೊದಲು ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮಗುಚಿ ಬಿದ್ದಿತ್ತು. ಅದರಲ್ಲಿ ಆರು ಮಂದಿ ಇದ್ದರು. ಆಗ ಅವರ ರಕ್ಷಣೆಗೆ ಸರಿಯಾದ ಬೋಟ್ ಸಿಕ್ಕಿರಲಿಲ್ಲ. ಮೀನುಗಾರಿಕೆಗೆ ತೆರಳುವ ಬೋಟ್ನಲ್ಲಿ ಬೇರೆ ಬೇರೆ ಸಾಮಗ್ರಿಗಳು ಇರುತ್ತವೆ. ಅದಕ್ಕಾಗಿ ಬೋಟ್ ಆಂಬ್ಯುಲೆನ್ಸ್ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಕುರಿತು ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಗನೀಫ್ ಮಾತನಾಡಿ “ಸಮುದ್ರದಲ್ಲಿ ಯಾವುದಾದರೂ ಅವಘಡ ಸಂಭವಿಸಿದರೆ, ಈ ಎಮರ್ಜೆನ್ಸಿ ಬೋಟ್ ತಕ್ಷಣ ಸ್ಥಳಕ್ಕೆ ತೆರಳುತ್ತದೆ. ಮಂಗಳೂರು ಭಾಗದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಲೈಫ್ ಜಾಕೆಟ್, ಲೈಫ್ ಬಾಯ್ ಇದರಲ್ಲಿ ಇರುತ್ತಾರೆ. ಇದು ಉಳ್ಳಾಲ ಧಕ್ಕೆಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಫೋನ್ ಬಂದರೆ ನಾವು ಮೀನುಗಾರಿಕೆ ನಡೆಸುವ ಬೋಟ್ಗಳನ್ನು ಕೊಂಡೋಗುತ್ತಿದ್ದೆವು. ಅದರ ಬದಲಿಗೆ ಈ ಎಮರ್ಜೆನ್ಸಿ ಬೋಟ್ ಮೂಲಕ ಮುಂದೆ ಕಾರ್ಯನಿರ್ವಹಣೆ ನಡೆಯುತ್ತದೆ ಎಂದರು.
ಇದರ ನಿರ್ಮಾಣ ಕಾರ್ಯ ಮೂರು ತಿಂಗಳಲ್ಲಿ ಪೂರ್ಣಗೊಂಡು ಸೇವೆ ನೀಡಲಿದೆ. ಉಳ್ಳಾಲ ನದಿ ತೀರದಲ್ಲಿ ಇರಲಿರುವ ಈ ಆಂಬ್ಯುಲೆನ್ಸ್ ಬೋಟ್ ಸಮುದ್ರದಲ್ಲಿ ಯಾವುದೇ ಮೀನುಗಾರರು ಅಸ್ವಸ್ಥರಾಗಿದ್ದರೆ ಸ್ಥಳಕ್ಕೆ ತೆರಳಲಿದೆ. ಅಲ್ಲಿ ಅಸ್ವಸ್ಥಗೊಂಡಿರುವ ಮೀನುಗಾರನನ್ನು ಬೋಟ್ ಆಂಬ್ಯುಲೆನ್ಸ್ನಲ್ಲಿ ತೀರಕ್ಕೆ ತಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಿದೆ. ಈ ಬೋಟ್ ಆಂಬ್ಯುಲೆನ್ಸ್ನಲ್ಲಿ ಕಾರ್ಯನಿರ್ವಹಿಸಲೆಂದೇ ಮೀನುಗಾರರನ್ನು ಸನ್ನದ್ಧವಾಗಿ ಇರಿಸಲಾಗುತ್ತದೆ.