ಜನಸಂಖ್ಯಾ ನಿಯಂತ್ರಣ ಇಂದಿನ ಅಗತ್ಯತೆಗಳಲ್ಲಿ ಒಂದು: ಮಾಲಿನಿ ಜೆ. ಶೆಟ್ಟಿ

ಉಡುಪಿ, ಜುಲೈ 19: ಜನಸಂಖ್ಯೆ ಹೆಚ್ಚಳ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಜನಸಂಖ್ಯಾ ನಿಯಂತ್ರಣ ಇಂದಿನ ಅಗತ್ಯತೆಗಳಲ್ಲಿ ಒಂದು. ಸಮತೋಲಿತ ಸಮುದಾಯ ಮತ್ತು ಸಂಪನ್ಮೂಲಗಳ ಬಳಕೆ ಸರಿಯಾದ ದಾರಿಯಲ್ಲಿ ಇರಬೇಕು ಮುಂದಿನ ಪೀಳಿಗೆ ಈ ದಿಸೆಯಲ್ಲಿ ಸಾಗಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ ತಿಳಿಸಿದರು.
ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಕಾರ್ಕಳ ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು ಮತ್ತು ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜು, ಮುನಿಯಾಲು, ಗ್ರಾಮ ಪಂಚಾಯತ್ ವರಂಗ, ಲಯನ್ಸ್ ಕ್ಲಬ್ ಮುನಿಯಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಮುನಿಯಾಲು ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಗಳನ್ನು ಸಮುದಾಯದವರು ಅನುಸರಿಸಿ ಭವ್ಯ ಸಮಾಜ ಕಟ್ಟುವಲ್ಲಿ ಸಹಕರಿಸಬೇಕೆಂದು ತಿಳಿಸಿದರು.
ಜಿ.ಪಂ.ಸದಸ್ಯೆ ಜ್ಯೋತಿ ಹರೀಶ್ ವಿಶ್ವ ಜನಸಂಖ್ಯಾ ದಿನಾಚರಣೆಯ ಮಾಹಿತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಜನಸಂಖ್ಯಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ –ಜನಸಂಖ್ಯಾ ಸ್ಪೋಟದ ಸಮಸ್ಯೆಗಳ ಬಗ್ಗೆ ಕಿರುನೋಟ ಬೀರಿ ಇಂದಿನ ಅಗತ್ಯತೆ ಏನು ಎಂದು ತಿಳಿಸಿದರು.


ಅತಿಥಿಗಳಾದ ಲಯನ್ಸ್ ಕ್ಲಬ್ ಮುನಿಯಾಲು, ಅಧ್ಯಕ್ಷ ಮಂಜುನಾಥ ಟಿ. ಮತ್ತು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬೇಬಿ ಶೆಟ್ಟಿ ಮಾತನಾಡಿ, ಕಾರ್ಯಕ್ರಮದ ಮಹತ್ವ ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಅಂತರದ ಹೆರಿಗೆ, ತಾತ್ಕಾಲಿಕ ಶಾಶ್ವತ ವಿಧಾನಗಳು, ಜನಸಂಖ್ಯಾ ಹೆಚ್ಚಳದಿಂದಾಗುವ ಪರಿಸರ ಅಸಮತೋಲನ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.
ಕಾರ್ಕಳ ತಾಲೂಕಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಾಧನೆಗೈದ ಡಾ.ಶಮಾ ಶುಕುರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕುಮುದಾವತಿ, ವಿಮಲ ಬಾಯಿರಿ ಮತ್ತು ರೇಶ್ಮಾ ಹಾಗೂ ಆಶಾಕಾರ್ಯಕರ್ತೆಯರಾದ ಜಯಶ್ರೀ ಮತ್ತು ಸುಮನ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಹಿರಿಯ ಆರೋಗ್ಯ ಸಹಾಯಕಿ ಅನ್ಕಕುಟ್ಟಿ ಕಾರ್ಯಕ್ರಮ ನೆರವೇರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಕಾರ್ಯಕ್ರಮ ನಿರೂಪಿಸಿದರು. ಡಾ.ಕಾರ್ತಿಕೇಶ್ ಐತಾಳ್ ಸ್ವಾಗತಿಸಿದರು, ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸೌಮ್ಯ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಶ್ರೀ ಪದ್ಮಾವತಿ ಕಲ್ಯಾಣ ಮಂಟಪದವರೆಗೆ ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಜಾಥಾ ಕಾರ್ಯಕ್ರಮಕ್ಕೆ ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಚಾಲನೆ ನೀಡಿ ಜನಸಂಖ್ಯೆ ಹೆಚ್ಚಳ ಗಂಭಿರತೆ, ಜಾಗೃತಿ ಅಗತ್ಯತೆ ಕುರಿತು ತಿಳಿಸಿದರು.