ನವದೆಹಲಿ: ಭಾರತೀಯ ಜನತಾ ಪಕ್ಷದ ಸದಸ್ಯರು ನಗರಾದ್ಯಂತ ಮನೆ ಮನೆಗೆ ತೆರಳಿ ಅಯೋಧ್ಯೆಯ ರಾಮ ಮಂದಿರವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದ ನಂತರ ಭೇಟಿ ನೀಡುವಂತೆ ಜನರನ್ನು ಆಹ್ವಾನಿಸಲಿದ್ದಾರೆ ಎಂದು ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ಭಾನುವಾರ ಹೇಳಿದ್ದಾರೆ.ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದೆ.
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ದೇವಾಲಯದಲ್ಲಿ ಜನವರಿ 22 ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನೆರವೇರಿದ ನಂತರ ಭಕ್ತರಿಗೆ ತೆರೆಯಲಾಗುವುದು. ಬಿಜೆಪಿ ‘ರಾಮ ಉತ್ಸವ’ ಎಂದು ಆಚರಿಸುತ್ತದೆ ಎಂದು ಸಚ್ದೇವ ತಿಳಿಸಿದ್ದಾರೆ.
ದೆಹಲಿ ಬಿಜೆಪಿಯ ಸಾಂಸ್ಥಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚ್ದೇವ, “ಜನವರಿ 1 ರಿಂದ ಜನವರಿ 15ರ ವರೆಗೆ ನಾವು ಮನೆ ಮನೆಗೆ ತೆರಳಿ ಆಮಂತ್ರಣ ನೀಡುತ್ತೇವೆ. ಜೊತೆಗೆ, ಎಲ್ಲಾ ದೇವಾಲಯಗಳನ್ನು ಅಲಂಕರಿಸಲು ದೇವಾಲಯ ಸಮಿತಿಗಳೊಂದಿಗೆ ಮಾತನಾಡುತ್ತೇವೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರ ಮಾತುಗಳನ್ನು ಕೇಳಲು ಉತ್ಸುಕರಾಗಿದ್ದಾರೆ” ಎಂದು ಹೇಳಿದರು.
ಬಳಿಕ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, “2019ಕ್ಕಿಂತ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಸುಲಭ. ಆದರೆ, ಚುನಾವಣಾ ತಯಾರಿಯಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ. ಇಂದು ನಮ್ಮ ಮುಂದಿರುವ ಸವಾಲುಗಳು ಕೇವಲ ರಾಜಕೀಯ ಪಕ್ಷಗಳಿಂದ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಪ್ರಯತ್ನದಲ್ಲಿ ವಿರೋಧ ಪಕ್ಷಗಳಿಗೆ ಸಹಾಯ ಮಾಡುತ್ತಿರುವ ಸೈದ್ಧಾಂತಿಕ ಶಕ್ತಿಗಳು ಕೂಡ ಇವೆ” ಎಂದು ಹೇಳಿದರು.
ಇನ್ನು 2024 ರ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಸತತ ಮೂರನೇ ಬಾರಿಗೆ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಸಭೆಯಲ್ಲಿ ಪ್ರತಿಪಾದಿಸಿದರು. ಅಯೋಧ್ಯೆಯ ರಾಮಮಂದಿರದ ಕುರಿತು ಜಾಗೃತಿ ಅಭಿಯಾನದ ಹೊರತಾಗಿ ಪಕ್ಷ ನಡೆಸುತ್ತಿರುವ ಪ್ರಚಾರಗಳು ಮತ್ತು ಇ-ವಿಸ್ತಾರಕ್ ಯೋಜನೆ, ಸಮರ್ಪಣ್ ನಿಧಿ ಯೋಜನೆ, ಉತ್ತಮ ಆಡಳಿತ ದಿನ ಮತ್ತು ವೀರ್ ಬಾಲ್ ದಿವಸ್ನಂತಹ ವಿಶೇಷ ಸಂದರ್ಭಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ದೆಹಲಿಯ ಎಲ್ಲಾ 13,000 ಪಕ್ಷದ ಬೂತ್ಗಳ ಕಾರ್ಯಕರ್ತರನ್ನು ‘ವೀಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ ಮತ್ತು ಬೂತ್ ಸಬಲೀಕರಣ ಅಭಿಯಾನಗಳ ಯಶಸ್ಸಿಗೆ ಶ್ರಮಿಸುವಂತೆ ಕೋರಿದರು. ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಯ ದಿನದಂದು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸಲು ಮತ್ತು ಕುಟುಂಬದೊಂದಿಗೆ ಯಾವುದೇ ದೇವಾಲಯಕ್ಕೆ ಭೇಟಿ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಅವರು ಹೇಳಿದರು.
ನಂತರ ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ದೆಹಲಿ ಘಟಕದ ಉಸ್ತುವಾರಿ ಬೈಜಯಂತ್ ಪಾಂಡಾ, “ಇತ್ತೀಚಿಗೆ ಕೆಲವು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಪಕ್ಷಕ್ಕೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಅನುಮಾನ ಬೇಡ. ನಾವು ದೆಹಲಿಯ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲುತ್ತೇವೆ. ಆದರೆ, ಗೆಲುವಿನ ಅಂತರವನ್ನು ಹೆಚ್ಚಿಸಲು ನಾವು ಪ್ರಯತ್ನಿಸಬೇಕಾಗಿದೆ, ಇದಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತನಾಡಬೇಕು” ಎಂದು ಹೇಳಿದರು.
ಅಯೋಧ್ಯೆಯಲ್ಲಿ ಉದ್ಘಾಟನಾ ಸಮಾರಂಭದ ನೇರ ಪ್ರಸಾರದಲ್ಲಿ ಪಾಲ್ಗೊಳ್ಳಲು ದೊಡ್ಡ ಎಲ್ಇಡಿ ಪರದೆಗಳನ್ನು ಸ್ಥಾಪಿಸಲಾಗುವುದು ಮತ್ತು ದೆಹಲಿಯ ಮಾರುಕಟ್ಟೆಗಳನ್ನು ಸಹ ಅಲಂಕರಿಸಲಾಗುವುದು. ಈ ಹಿನ್ನೆಲೆ ವ್ಯಾಪಾರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯ ಪ್ರತಿ ವಾರ್ಡ್ನಲ್ಲಿಯೂ ಸಹ ಉದ್ಘಾಟನಾ ಸಮಾರಂಭದ ನೇರ ಪ್ರಸಾರ ನೋಡಲು ವ್ಯವಸ್ಥೆ ಮಾಡಲಾಗುವುದು. ಹಾಗೆಯೇ, ಅಯೋಧ್ಯೆಯ ರಾಮ ಮಂದಿರವನ್ನು ತೆರೆದ ನಂತರ ಭಕ್ತರು ಭೇಟಿ ನೀಡಬಹುದು ಎಂದು ದೆಹಲಿ ಬಿಜೆಪಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.