ಒಂದೇಟಿಗೆ ನಾಲ್ಕು ಹಕ್ಕಿ!! ಒಂದೇ ಬಾರಿಗೆ ನಾಲ್ಕು ಟಾರ್ಗೆಟ್ ಗಳನ್ನು ಧ್ವಂಸ ಮಾಡಿ ಶಕ್ತಿ ಪ್ರದರ್ಶಿಸಿದ ಭಾರತದ ಆಕಾಶ್ ಮಿಸೈಲ್ ಲಾಂಚರ್!

ಹೈದರಾಬಾದ್: ಆಂಧ್ರಪ್ರದೇಶದ ಸೂರ್ಯಲಂಕಾ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಇತ್ತೀಚೆಗೆ ನಡೆದ ‘ಅಸ್ತ್ರಶಕ್ತಿ 2023’ ವಾಯು ವ್ಯಾಯಾಮದ ಸಮಯದಲ್ಲಿ ಭಾರತದಲ್ಲಿ ನಿರ್ಮಿಸಲಾದ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಶಕ್ತಿಯನ್ನು ಪ್ರದರ್ಶಿಸಲಾಯಿತು.

ಡಿಸೆಂಬರ್ 12 ರಂದು ಭಾರತೀಯ ವಾಯುಪಡೆ (ಐಎಎಫ್) ನಡೆಸಿದ ಅಸ್ತ್ರಶಕ್ತಿ ವ್ಯಾಯಾಮದ ಸಮಯದಲ್ಲಿ ಒಂದೇ ಒಂದು ಆಕಾಶ್ ಕ್ಷಿಪಣಿ ವ್ಯವಸ್ಥೆಯು ಏಕಕಾಲದಲ್ಲಿ ನಾಲ್ಕು ಮಾನವರಹಿತ ವೈಮಾನಿಕ ಗುರಿಗಳನ್ನು ಹೊಡೆದುರುಳಿಸಿದೆ.

ಒಂದೇ ಫೈರಿಂಗ್ ಘಟಕವನ್ನು ಬಳಸಿಕೊಂಡು ಕಮಾಂಡ್ ಮಾರ್ಗದರ್ಶನದ ಮೂಲಕ ಸುಮಾರು 30 ಕಿಮೀ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಾಲ್ಕು ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಪ್ರದರ್ಶಿಸಿದ ಮೊದಲ ದೇಶ ಭಾರತವಾಗಿದೆ.

ಒಂದೇ ದಿಕ್ಕಿನಿಂದ ಬಂದು ಬಳಿಕ ವಿಭಜನೆ ಹೊಂದಿ ಎಲ್ಲ ದಿಕ್ಕಿನಿಂದಲೂ ಆಕ್ರಮಣ ಮಾಡಿದ ನಾಲ್ಕು ಪ್ರತ್ಯೇಕ ಟಾರ್ಗೆಟ್ ಗಳನ್ನು ಆಕಾಶ್ ಕ್ಷಿಪಣಿ ಫೈರಿಂಗ್ ಘಟಕವು ಒಂದೇಟಿಗೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಎರಡು ಆಕಾಶ್ ಕ್ಷಿಪಣಿಗಳನ್ನು ಎರಡು ಲಾಂಚರ್‌ಗಳಿಂದ ಉಡಾಯಿಸಲಾಯಿತು ಮತ್ತು ಅದೇ ಲಾಂಚರ್ ಅನ್ನು ಮುಂದಿನ ಎರಡು ಗುರಿಗಳಿಗೆ ನಿಯೋಜಿಸಲಾಗಿದೆ.

ಆಕಾಶ್ ಕ್ಷಿಪಣಿ ವ್ಯವಸ್ಥೆಯು ಮೊದಲ ಸ್ವದೇಶಿ ಅತ್ಯಾಧುನಿಕ ಗಾಳಿ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಸುಮಾರು ಒಂದು ದಶಕದ ಕಾಲ ಸಶಸ್ತ್ರ ಪಡೆಗಳೊಂದಿಗೆ ಸೇವೆ ಸಲ್ಲಿಸಿದ್ದು ಭಾರತೀಯ ಆಕಾಶವನ್ನು ರಕ್ಷಿಸುತ್ತದೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಒದಗಿಸುತ್ತದೆ. ಡಿ.ಆರ್.ಡಿ.ಒ ನಿರ್ಮಿತ ಕ್ಷಿಪಣಿ ವ್ಯವಸ್ಥೆಯು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲಿದೆ.